ಬೆಂಗಳೂರು: ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Update: 2019-11-21 17:48 GMT

ಬೆಂಗಳೂರು, ನ.21: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಹೆಚ್ಚಿಸಿರುವ ಹಾಸ್ಟೆಲ್ ಶುಲ್ಕವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಎಸ್‌ಎಫ್‌ಐ, ಎಐಡಿಎಸ್‌ಒ, ಎಐಎಸ್‌ಎಫ್, ಕೆವಿಎಸ್ ಸಂಘಟನೆಗಳ ಸದಸ್ಯರು, ಈ ಕೂಡಲೇ ವಿದ್ಯಾರ್ಥಿಗಳ ಶುಲ್ಕ ಕಡಿತಗೊಳಿಸಿ, ಮೊದಲಿದ್ದ ಮೊತ್ತಕ್ಕೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಜೆಎನ್‌ಯು ದೇಶದ ಹಳೆಯದಾದ ವಿಶ್ವದ್ಯಾಲಯವಾಗಿದ್ದು, ಎಲ್ಲ ಸಮುದಾಯದ ವಿದ್ಯಾರ್ಥಿಗಳು ಕಡಿಮೆ ದರದಲ್ಲಿ ಓದಬಹುದಾದ ಏಕೈಕ ವಿವಿ ಆಗಿದೆ. ಆದರೆ, ಕಳೆದ ಐದು ವರ್ಷಗಳಿಂದ ಕೇಂದ್ರ ಸರಕಾರದ ಹಸ್ತಕ್ಷೇಪ ಹೆಚ್ಚಾದ ಕಾರಣ ಇಲ್ಲಿಯ ಕಲಿಕೆಯ ವಾತಾವರಣವನ್ನೆ ಹದಗೆಡಿಸಲು ಹುನ್ನಾರ ನಡೆಸುತ್ತಲೇ ಬಂದಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇತ್ತಿಚೆಗೆ ಕೇಂದ್ರ ಸರಕಾರದ ಶಿಕ್ಷಣದ ವ್ಯಾಪಾರೀಕರಣದ ಭಾಗವಾಗಿ ಜೆಎನ್‌ಯು ಆಡಳಿತ ಮಂಡಳಿ ಏಕಾಏಕಿ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದ್ದನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸರಕಾರ ಪೊಲೀಸ್ ಬಲವನ್ನು ಬಳಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡ ದೊಡ್ಡ ಉದ್ಯಮಿಗಳಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ 12 ಲಕ್ಷ ಕೋಟಿ ರೂ. ತೆರಿಗೆ ಮತ್ತು ಸಾಲ ಮನ್ನಾ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ 92 ದೇಶಗಳನ್ನು ಸುತ್ತಿ 2021 ಕೋಟಿ ರೂ. ಹಣ ಖರ್ಚು ಮಾಡಿದ್ದಾರೆ. ಅನೇಕ ಉದ್ಯಮಿಗಳು ಕೋಟ್ಯಂತರ ರೂಪಾಯಿ ಸಾಲ ಮಾಡಿ, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆದರೆ, ಈ ನಿಜಾಂಶ ಬಿಟ್ಟು, ಕೇಂದ್ರ ಸರಕಾರ ಜೆಎನ್‌ಯು ವಿರುದ್ಧ ಅಪಪ್ರಚಾರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ ದೇಸಾಯಿ, ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ, ಎಐಡಿಎಸ್‌ಒ ಅಧ್ಯಕ್ಷೆ ಕೆ.ಎಸ್.ಆಶ್ವಿನಿ, ಕಾರ್ಯದರ್ಶಿ ಅಜಯ್ ಕಾಂತ್, ಎಐಎಸ್‌ಎಫ್ ಅಧ್ಯಕ್ಷೆ ಕೆ.ಜ್ಯೋತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News