ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಜಾಹೀರಾತು ಫಲಕಗಳು ತೆರವು

Update: 2019-11-21 17:50 GMT

ಬೆಂಗಳೂರು, ನ.21: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆರೆವುಗೊಳಿಸುವಂತೆ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೆ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿರುವ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿ, ದಂಡ ವಿಧಿಸಿದ್ದಾರೆ.

ಬಿಬಿಎಂಪಿಯು ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ನಂತಹ ಒಟ್ಟು 1,806 ಅನಧಿಕೃತ ಜಾಹೀರಾತು ಫಲಕಗಳಿವೆ. ಈ ಅನಧಿಕೃತ ಫಲಕಗಳನ್ನು ಹೈಕೋರ್ಟ್ ತೆರವುಗೊಳಿಸುವಂತೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ನೇತೃತ್ವದಲ್ಲಿ ನಗರದ ಹಲವಡೆ ಅನಧಿಕೃತ ಜಾಹೀರಾತು ತೆರವು ಕಾರ್ಯ ಕೈಗೊಳ್ಳಲಾಗಿತ್ತು.

ನಗರದ ಮಲ್ಲೇಶ್ವರಂನಲ್ಲಿ ಮರಕ್ಕೆ ಸುತ್ತುವರೆದಿದ್ದ ಖಾಸಗಿ ಜಾಹೀರಾತು ಫಲಕವನ್ನು ತೆರವುಗೊಳಿಸಿ, ಮರದ ಬೆಳವಣಿಗೆಗೆ ಅಡ್ಡಿ ಪಡಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇಂತಹ ಪ್ರಕರಣಗಳು ಕಂಡು ಬಂದರೆ ನಾಗರಿಕರು, ಬಿಬಿಎಂಪಿಯ ಸಹಾಯ ಆ್ಯಪ್ ಮೂಲಕ ದೂರು ಸಲ್ಲಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.

ಬಿಡಾಡಿ ದನ ರಕ್ಷಣೆ: ನಗರದ ವಿ.ವಿ ಪುರದಲ್ಲಿ ಗುರುವಾರದಂದು ದನ ಹಿಡಿಯುವ ಕಾರ್ಯಾಚರಣೆ ನಡೆಯಿತು. ಬಿಬಿಎಂಪಿಯ ತಂಡ ನಗರದ ಬೀದಿಗಳಲ್ಲಿ ಅಲೆಯುವ ಪಶುಗಳನ್ನು ಹಿಡಿದು, ರಕ್ಷಣೆ ಮಾಡಿ ನಿಧಾನ ಗತಿಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಕಸವನ್ನು ಪಶುಗಳು ಸೇವಿಸದಂತೆ ತಡೆಯಲು ಶ್ರಮಿಸಿತು. ಸಾಕು ಪ್ರಾಣಿಗಳನ್ನು ರಸ್ತೆಯಲ್ಲಿ ಬಿಡುವ ಮಾಲಕರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News