ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಡಿ.4ರಂದು ಚುನಾವಣೆ

Update: 2019-11-21 17:57 GMT

ಬೆಂಗಳೂರು, ನ.21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹನ್ನೆರಡು ಸ್ಥಾಯಿ ಸಮಿತಿಗಳಿಗೆ ಡಿ.4ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ.

ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ 9 ಸ್ಥಾಯಿ ಸಮಿತಿ ಸೇರಿ 12 ಸಮಿತಿಗಳಿಗೂ ಚುನಾವಣೆ ನಡೆಯಲಿದ್ದು, ಡಿ.4ರಂದು ಬೆಳಗ್ಗೆ 11:30ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ.

ಮೇಯರ್ ಆಯ್ಕೆ ಸಂದರ್ಭದಲ್ಲಿಯೇ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆಗೆ ನಡೆಸಬೇಕಾಗಿದ್ದ ಚುನಾವಣೆ ಗೊಂದಲದಿಂದಾಗಿ ಮುಂದೂಡಲಾಗಿತ್ತು. ಈ ವೇಳೆ ಒಂಬತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿ ‘ಡಿಸೆಂಬರ್‌ವರೆಗೆ ನಮ್ಮ ಕಾಲಾವಧಿ ಇದ್ದು, ಸೆಪ್ಟೆಂಬರ್‌ನಲ್ಲೇ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವುದರಿಂದ ನಮ್ಮ ಹಕ್ಕುಗಳು ಮೊಟಕಾಗುತ್ತದೆ’ ಎಂದು ವಿನಂತಿಸಿಕೊಂಡಿದ್ದರು. ಆದ್ದರಿಂದ ಒಂಬತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ಕೋರ್ಟ್ ತಡೆ ನೀಡಿ, ಅವಧಿ ಪೂರ್ಣಗೊಳ್ಳುವವರೆಗೂ ಚುನಾವಣೆ ನಡೆಸದಂತೆ ಕೋರ್ಟ್ ಆದೇಶಿಸಿತ್ತು.

ಹೀಗಾಗಿ ಒಂಬತ್ತು ಸ್ಥಾಯಿ ಸಮಿತಿ ಹೊರತು ಪಡಿಸಿ ಮೂರು ಸ್ಥಾಯಿ ಸಮಿತಿಗಳ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು. ಆದರೆ, ಪ್ರತಿ ಸ್ಥಾಯಿ ಸಮಿತಿಗೆ ಹನ್ನೊಂದು ಸದಸ್ಯರು ನಾಮಪತ್ರ ಸಲ್ಲಿಸಬೇಕಿತ್ತಾದರೂ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಸಿರಲಿಲ್ಲ. ಈಗ ಡಿ. 4ರೊಳಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಮುಂದಾಗಿದ್ದಾರೆ.

ಯಾವ ಸ್ಥಾಯಿ ಸಮಿತಿ?: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಅಪೀಲು ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.

ಸದಸ್ಯರ ಅಧಿಕಾರಾವಧಿ ಹತ್ತು ತಿಂಗಳ ಮಾತ್ರ...

ಮೇಯರ್ ಮತ್ತು ಉಪಮೇಯರ್ ಅವಧಿಯಷ್ಟೇ ಸ್ಥಾಯಿ ಸಮಿತಿ ಸದಸ್ಯರ ಅವಧಿ ಇದ್ದು, ಮೇಯರ್ ಚುನಾವಣೆ ವೇಳೆ ನಡೆಯಬೇಕಾಗಿದ್ದ ಚುನಾವಣೆ ಮುಂದೂಡಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವುದರಿಂದ ಸದಸ್ಯರ ಅಧಿಕಾರಾವಧಿ ಹತ್ತು ತಿಂಗಳು ಮಾತ್ರ ಇರಲಿದೆ. 2020 ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಮೇಯರ್ ಅವಧಿ ಮುಗಿಯಲಿದ್ದು, ನಂತರ ಪಾಲಿಕೆ ಚುನಾವಣೆ ನಡೆಯಲಿದೆ.

ಸ್ಥಾಯಿ ಸಮಿತಿ ಚುನಾವಣೆಗೆ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಚುನಾವಣೆಗೆ ವಾರದ ಮುನ್ನವೇ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. ಒಂದೇ ದಿನದಲ್ಲಿ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲಾಗುವುದು.

- ಹರ್ಷಗುಪ್ತ, ಪ್ರಾದೇಶಿಕ ಆಯುಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News