ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಕೋಲ್ಕತಾ

Update: 2019-11-21 18:01 GMT

ಕೋಲ್ಕತಾ, ನ.21: ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಶುಕ್ರವಾರ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್‌ನ್ನು ಆಡಲಿದ್ದು, ಗುಲಾಬಿ ಬಣ್ಣದ ಚೆಂಡಿನಲ್ಲಿ ಆಡುವುದು ಈ ಟೆಸ್ಟ್‌ನ ವಿಶೇಷತೆ. ನಗರವು ಗುಲಾಬಿ ಬಣ್ಣ ದ ಬೆಳಕು, ಅಲಂಕಾರಗಳಿಂದ ಕಂಗೊಳಿಸುತ್ತಿದೆ .ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ತಂಡದ ಮೊದಲ ಹಗಲು-ರಾತ್ರಿ ಟೆಸ್ಟ್ ನಲ್ಲಿ ಆಡುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಪಿಂಕ್ ಚೆಂಡು ಹಸ್ತಾಂತರ: ಕ್ರೀಡಾಂಗಣದಲ್ಲಿ ಟಾಸ್‌ಗೆ ಸ್ವಲ್ಪ ಮೊದಲು  ಸೈನ್ಯದ ಪ್ಯಾರಾಟ್ರೂಪರ್‌ಗಳು ಈಡನ್ ಗಾರ್ಡನ್‌ನಲ್ಲಿ ಇಳಿದು ಗುಲಾಬಿ ಬಣ್ಣದ ಚೆಂಡನ್ನು ಉಭಯ ತಂಡಗಳ ನಾಯಕರಿಗೆ ಹಸ್ತಾಂತರಿಸುತ್ತಾರೆ.

ಟಿಕೆಟ್ ಸೋಲ್ಡ್‌ಔಟ್: 65,000 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಸ್ಟೇಡಿಯಂನ ಹಗಲು -ರಾತ್ರಿ ಟೆಸ್ಟ್‌ನ ನಾಲ್ಕು ದಿನಗಳ ಟಿಕೆಟ್‌ಗಳು ಮಾರಾಟವಾಗಿವೆೆ ಎಂದು ಬಿಸಿಸಿಐ ಅಧ್ಯಕ್ಷ ಸೌ ರವ್ ಗಂಗುಲಿ ಬಹಿರಂಗಪಡಿಸಿದ್ದಾರೆ.

72 ಚೆಂಡು: ಕೋಲ್ಕತಾ ಟೆಸ್ಟ್‌ನಲ್ಲಿ ಮೊದಲ ಬಾರಿ ಎಸ್ಜಿ ಗುಲಾಬಿ ಚೆಂಡನ್ನು ಬಳಸಲಾಗುವುದು. ಇಲ್ಲಿಯವರೆಗೆ, ಕೂಕಬುರ್ರಾ ಮತ್ತು ಡ್ಯೂಕ್ಸ್ ಚೆಂಡಿನಲ್ಲಿ ಟೆಸ್ಟ್ ಕ್ರಿಕೆಟ್ ಆಡಲಾಗುತ್ತಿತ್ತು. ಭಾರತದಲ್ಲಿ, ಎಸ್ಜಿ ಟೆಸ್ಟ್ ಚೆಂಡನ್ನು ಟೆಸ್ಟ್ ಕ್ರಿಕೆಟ್ ಆಡಲು ಬಳಸಲಾಗುತ್ತದೆ. ಈ ಪಂದ್ಯಕ್ಕಾಗಿ ಬಿಸಿಸಿಐ ತನ್ನ ಟೆಸ್ಟ್ ಪಂದ್ಯದ ಚೆಂಡುಗಳ ಪೂರೈಕೆದಾರ ಮೀರತ್ ಮೂಲದ ಕ್ರೀಡಾ ತಯಾರಕ ಸ್ಯಾನ್ಸ್‌ಪಿರೀಲ್ ಗ್ರೀನ್‌ಲ್ಯಾಂಡ್ಸ್ (ಎಸ್ಜಿ) ಸಂಸ್ಥೆಗೆ 72 ಗುಲಾಬಿ ಚೆಂಡುಗಳನ್ನು ತಲುಪಿಸಲು ಕೇಳಿಕೊಂಡಿದೆ.

ಗುಲಾಬಿ ಚೆಂಡು ಏಕೆ?: ಸಾಮಾನ್ಯವಾಗಿ ಬೆಳಗ್ಗೆ ಆರಂಭಗೊಂಡು ಸಂಜೆ ಮುಕ್ತಾಯಗೊಳ್ಳುವ ಟೆಸ್ಟ್ ಪಂದ್ಯಗಳನ್ನು ಕೆಂಪು ಚೆಂಡಿನೊಂದಿಗೆ ಆಡಲಾಗುತ್ತದೆ. ಹಗಲು - ರಾತ್ರಿ ಟೆಸ್ಟ್‌ನ ಸಂದರ್ಭದಲ್ಲಿ ಕೃತಕ ದೀಪಗಳ ಅಡಿಯಲ್ಲಿ ಆಡುವಾಗ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.

ಯಾಕೆಂದರೆ ಕೆಂಪು ಚೆಂಡು ರಾತ್ರಿ ಹೊತ್ತು ಹೊಳಪು ಮತ್ತು ಬಣ್ಣವನ್ನು ಕಳೆದುಕೊಳ್ಳುತ್ತದೆ ಮತ್ತು ಆಟ ಮುಂದುವರಿದಂತೆ ಕಂದು ಬಣ್ಣದಲ್ಲಿ ಕಾಣುತ್ತದೆ, ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ಅದನ್ನು ಫ್ಲೆಡ್‌ಲೈಟ್‌ನ ಬೆಳಕಿನಲ್ಲಿ ಗುರುತಿಸುವುದು ಕಷ್ಟವಾಗುತ್ತದೆ. ಗುಲಾಬಿ ಚೆಂಡುಗಳು ಉತ್ತಮ ಗೋಚರತೆಯನ್ನು ಹೊಂದಿವೆ ಮತ್ತು ಅವುಗಳ ಬಣ್ಣ ಮತ್ತು ಆಕಾರವನ್ನು ನಿಧಾನವಾಗಿ ಕಳೆದುಕೊಳ್ಳುತ್ತವೆ, ಹೀಗಾಗಿ, ಅವುಗಳನ್ನು ಟೆಸ್ಟ್ ಕ್ರಿಕೆಟ್‌ನ್ನು ಫ್ಲೆಡ್‌ಲೈಟ್‌ನಲ್ಲಿ ಆಡುವಾಗ ಬಳಸಲಾಗುತ್ತದೆ. ಹಳದಿ, ಕಿತ್ತಳೆ ಮತ್ತು ಗುಲಾಬಿ ಬಣ್ಣದ ಚೆಂಡುಗಳೊಂದಿಗೆ ಪ್ರಯೋಗಗಳು ನಡೆದವು ಮತ್ತು ಸುಧಾರಿತ ಬಿಳಿ ಚೆಂಡಿನೊಂದಿಗೆ ಆಟವಾಡುವ ಸಲಹೆಯೂ ಇತ್ತು. ಇಲ್ಲಿಯವರೆಗೆ ಗುಲಾಬಿ ಚೆಂಡಿನಲ್ಲಿ ಆಡಿದ ಎಲ್ಲಾ 11 ಟೆಸ್ಟ್ ಪಂದ್ಯಗಳು ಉತ್ತಮ ಫಲಿತಾಂಶದೊಂದಿಗೆ ಕೊನೆಗೊಂಡಿವೆ. ಗುಲಾಬಿ ಚೆಂಡು ಸ್ವಲ್ಪ ಹೆಚ್ಚು ಸ್ವಿಂಗ್ ಆಗುತ್ತದೆ ಎಂದು ಹೇಳಲಾಗುತ್ತದೆ.

ಕೂಕಬುರ್ರಾ, ಡ್ಯೂಕ್ಸ್ ಮತ್ತು ಎಸ್ಜಿ ಅಂತರ್‌ರಾಷ್ಟ್ರೀಯ ಪಂದ್ಯಗಳಿಗೆ ಕ್ರಿಕೆಟ್ ಚೆಂಡುಗಳ ತಯಾರಿಸುವ ಪ್ರಮುಖ ಸಂಸ್ಥೆಗಳಾಗಿವೆ. ಭಾರತವು ಎಸ್ಜಿ ಚೆಂಡನ್ನು ಬಳಸಿದರೆ, ಇಂಗ್ಲೆಂಡ್, ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಂಗ್ಲೆಂಡ್‌ನಲ್ಲಿ ತಯಾರಿಸಲಾಗುವ ಡ್ಯೂಕ್ಸ್ ಚೆಂಡನ್ನು ಬಳಸುತ್ತವೆ. ಟೆಸ್ಟ್ ಆಡುವ ಅನೇಕ ರಾಷ್ಟ್ರಗಳು ಆಸ್ಟ್ರೇಲಿಯಾದಲ್ಲಿ ತಯಾರಾಗುವ ಕೂಕಬುರ್ರಾ ಚೆಂಡನ್ನು ಬಳಸಿಕೊಳ್ಳುತ್ತಿವೆ.

ಪಿಂಕ್ ಬಾಲ್ ಟೆಸ್ಟ್ ಯಾವಾಗ ಆರಂಭವಾಗುತ್ತದೆ ?: ಭಾರತದಲ್ಲಿ ಟೆಸ್ಟ್ ಪಂದ್ಯಗಳು ಸಾಮಾನ್ಯವಾಗಿ ಬೆಳಿಗ್ಗೆ 9:30ಕ್ಕೆ ಆರಂಭವಾಗುತ್ತದೆ. ಆದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 8:00 ಕ್ಕೆ ಕೊನೆಗೊಳ್ಳುತ್ತದೆ.

ಮೊದಲ ಅವಧಿ ಮಧ್ಯಾಹ್ನ 3:00 ಗಂಟೆಗೆ ಕೊನೆಗೊಳ್ಳುತ್ತದೆ. ಬಳಿಕ ಎರಡನೇ ಅವಧಿ ಮಧ್ಯಾಹ್ನ 3:40ಕ್ಕೆ ಪುನರಾರಂಭಗೊಳ್ಳುತ್ತದೆ. ಸಂಜೆ 5:40ಕ್ಕೆ 20 ನಿಮಿಷಗಳ ಚಹಾ ವಿರಾಮ ಮತ್ತು ಅಂತಿಮ ಆಟವು ಸಂಜೆ 6:00 ಗಂಟೆಗೆ ಪ್ರಾರಂಭವಾಗಲಿದೆ.

ವಿಭಿನ್ನ ತಯಾರಕರ ಗುಲಾಬಿ ಚೆಂಡಿನ ನಡುವಿನ ವ್ಯತ್ಯಾಸ: ಎಲ್ಲಾ ಮೂರು ಚೆಂಡುಗಳಲ್ಲೂ ಚೆಂಡಿನ ಕೇಂದ್ರ ಸೀಮ್ ಸುತ್ತಲೂ ಆರು ಸಾಲುಗಳ ಹೊಲಿಗೆಗಳನ್ನು ಹೊಂದಿವೆ. ಆದಾಗ್ಯೂ, ಡ್ಯೂಕ್ಸ್ ಮತ್ತು ಎಸ್ಜಿ ಎಲ್ಲಾ ಆರು ಸಾಲುಗಳಲ್ಲಿ ಕೈಯಿಂದ ಹೊಲಿಯಲ್ಪಟ್ಟರೆ, ಕೂಕಬುರ್ರಾ ಎರಡು ಸಾಲುಗಳನ್ನು (ಒಳ ಸೀಮ್) ಮಾತ್ರ ಕೈಯಿಂದ ಹೊಲಿಯುತ್ತಾರೆ; ನಾಲ್ಕು ಹೊರಗಿನ ಸಾಲುಗಳನ್ನು ಯಂತ್ರಗಳಿಂದ ಹೊಲಿಯಲಾಗುತ್ತದೆ. ಅದಕ್ಕಾಗಿಯೇ ಕೂಕಬುರ್ರಾದ ಸೀಮ್ ಡ್ಯೂಕ್ಸ್ ಮತ್ತು ಎಸ್ಜಿ ಚೆಂಡುಗಳಿಗಿಂತ ವೇಗವಾಗಿ ಚಪ್ಪಟೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಚೆಂಡಿನ ದರ ಹೇಗಿದೆ ?: 2016ರಲ್ಲಿ ದೇಶೀಯ ಪಂದ್ಯಾವಳಿ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನು ಆಮದು ಮಾಡಲಾದ ಗುಲಾಬಿ ಚೆಂಡುಗಳೊಂದಿಗೆ ಆಡಲಾಗಿತ್ತು. ಈ ಚೆಂಡಿನ ಬೆಲೆ ದುಬಾರಿಯಾಗಿದೆ. ಇದರ ಬೆಲೆ 8,000 ರೂ. ಆದರೆ ಎಸ್ಜಿ ತಯಾರಿಸಿದ ಚೆಂಡಿನ ಬೆಲೆ ತಲಾ 2,700 ರೂ.

ಕೆಂಪು ಮತ್ತು ಗುಲಾಬಿ ಚೆಂಡಿನ ನಡುವಿನ ವ್ಯತ್ಯಾಸ: ಕೆಂಪು ಚೆಂಡಿನ ಮೇಲೆ ಬಿಳಿ ಬಣ್ಣಕ್ಕೆ ವಿರುದ್ಧವಾಗಿ ಎಸ್ಜಿ ಗುಲಾಬಿ ಚೆಂಡಿನ ಸೀಮ್‌ನ್ನು ಕಪ್ಪುದಾರದಿಂದ ಹೊಲಿಯಲಾಗುತ್ತದೆ. ಗುಲಾಬಿ ಚೆಂಡು ಹೆಚ್ಚುವರಿ ಬಣ್ಣ ಮತ್ತು ಬಣ್ಣದ ಉತ್ತಮ ಪದರವನ್ನು ಹೊಂದಿದೆ. ಇದರಿಂದ ಫ್ಲೆಡ್ ಲೈಟ್‌ನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News