ಲೈಸೆನ್ಸ್ ಪಡೆಯದ ಪಬ್-ಬಾರ್‌ಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

Update: 2019-11-21 18:28 GMT

ಬೆಂಗಳೂರು, ನ.21: ಪಬ್ ಮತ್ತು ಬಾರ್‌ಗಳ ಶಬ್ದಮಾಲಿನ್ಯ ನಿಯಂತ್ರಣ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಲೈಸೆನ್ಸ್ ಪಡೆಯದ ಬಾರ್‌ಗಳ ವಿರುದ್ಧ ಕ್ರಮ ಕೈಗೊಂಡು 2 ವಾರದಲ್ಲಿ ವರದಿ ಸಲ್ಲಿಸಲು ಪೊಲೀಸರಿಗೆ ಸೂಚಿಸಿದೆ. ಈ ಕುರಿತು ಇಂದಿರಾನಗರ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿ, ಮಾಲಿನ್ಯವನ್ನು ನಿಯಂತ್ರಿಸಲಾಗುವುದು ಎಂದು ಪೊಲೀಸ್ ಇಲಾಖೆಯು ಹೇಳಿಕೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಏಕೆ ಮಾಪಕಗಳನ್ನು ಖರೀದಿಸಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಲೈಸೆನ್ಸ್ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಬ್ದಮಾಲಿನ್ಯ ಮಾಪಕಗಳನ್ನು ಖರೀದಿಸಬೇಕೆಂದು ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.

ಪಬ್ ಮತ್ತು ಬಾರ್‌ಗಳಿಂದ ತಡರಾತ್ರಿವರೆಗೂ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಇಂದಿರಾನಗರ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪೊಲೀಸರು ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕೆಲವು ಅನಧಿಕೃತ ಪಬ್ ಮತ್ತು ಬಾರ್‌ಗಳ ಬಾಗಿಲುಗಳನ್ನು ಮುಚ್ಚಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News