ಬಿಎಸ್‌ವೈಯನ್ನು ತೆಗೆಯಲು ಕೇಂದ್ರದ ಬಿಜೆಪಿ ನಾಯಕರು ಕಾಯುತ್ತಿದ್ದಾರೆ: ಕುಮಾರಸ್ವಾಮಿ

Update: 2019-11-22 18:11 GMT

ಬೆಂಗಳೂರು, ನ. 22: ‘ಹದಿನೈದು ಕ್ಷೇತ್ರಗಳಲ್ಲಿಯೂ ನಾವು ಗೆದ್ದಿದ್ದೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, ಪ್ರತಿದಿನ ರವಿವಾರ ಅಲ್ಲ. ಜನ ಬದಲಾವಣೆ ಬಯಸಿದ್ದಾರೆ ಮತದಾರರು ಬುದ್ಧಿವಂತರಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ಕೆ.ನಾಶಿ ಅವರ ಪರ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಹೇಗೆ ತೆಗೆಯಬೇಕೆಂದು ಕೇಂದ್ರದ ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ ‘ಇದು ಕೊನೆಯ ಸಂಪುಟ ಸಭೆ ಆಗಬಹುದು’ ಎಂದು ಹೇಳಿದ್ದೇಕೇ? ಎಂದು ಪ್ರಶ್ನಿಸಿದ ಅವರು, ಬಿಎಸ್‌ವೈಗೆ ಎಷ್ಟು ಆತಂಕವಿದೆ ಎಂದು ಗೊತ್ತಾಗುತ್ತದೆ. ಲೋಕಸಭೆ ಚುನಾವಣೆ ಲೆಕ್ಕಾಚಾರದಲ್ಲಿ ಈ ಬಾರಿಯೂ 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಡಿ.9ರ ಫಲಿತಾಂಶದಿಂದ ಎಲ್ಲವೂ ಬಹಿರಂಗವಾಗಲಿದೆ ಎಂದು ತಿಳಿಸಿದರು.

ಮೋದಿ ಹೆಸರೇಳಿಕೊಂಡು ಬಂದವರು: ಸದಾನಂದಗೌಡ ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ. ಅವರೇನು ಕಷ್ಟ ಪಟ್ಟು ಅಧಿಕಾರಕ್ಕೆ ಬಂದಿಲ್ಲ. ಮೋದಿ ಹೇಸರು ಹೇಳಿ ಅಧಿಕಾರಕ್ಕೆ ಬಂದವರು ಇವರು. ಅವರಂತೆ ನಾವು ಹೆಸರೇಳಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.

'ನಾವು ಬೆವರು ಸುರಿಸಿ ಪಕ್ಷವನ್ನು ಕಟ್ಟುತ್ತಿದ್ದೆವೆ. ಆ ವ್ಯಕ್ತಿಯ ಹಿನ್ನೆಲೆಯೇನೆಂದು ಎಲ್ಲರಿಗೂ ಗೊತ್ತು. ಬದಲಾಗಿದ್ದಾರೆಂದು ಭಾವಿಸಿದ್ದೆವು. ಆದರೆ, ಅವರ ಹುಟ್ಟುಗುಣ ಹೋಗಿಲ್ಲ. ಅವರು ಯಾರ್ಯಾರಿಗೆ ಬೆದರಿಕೆ ಹಾಕಿದ್ದಾರೆಂದು ಗೊತ್ತಿದೆ. ಪೊಲೀಸರ ಮೂಲಕ ಕಿರುಕುಳ ನೀಡಲು ಹೊರಟರೆ ಸಹಿಸುವುದಿಲ್ಲ ಎಂದು ಅನರ್ಹ ಶಾಸಕ ಗೋಪಾಲಯ್ಯಗೆ ಎಚ್‌ಡಿಕೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News