ಶಾಸಕನ ಪುತ್ರ ಎಂದು ಬೆದರಿಸಿ ಅತ್ಯಾಚಾರಗೈದ ಆರೋಪ: ಯುವಕನ ಬಂಧನ

Update: 2019-11-22 13:53 GMT

ಬೆಂಗಳೂರು, ನ.22: ಶಾಸಕನ ಪುತ್ರ ಎಂದು ಬೆದರಿಸಿ ಯುವತಿಯ ಅತ್ಯಾಚಾರವೆಸಗಿರುವ ಆರೋಪದಡಿ ಯುವಕನನ್ನು ಇಲ್ಲಿನ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ರೆಡ್ಡಿ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಬಿಎ ವ್ಯಾಸಂಗ ಮಾಡಿದ್ದ ಆರೋಪಿ ಕಾರ್ತಿಕ್ ರೆಡ್ಡಿ, ಪ್ರತಿಷ್ಠಿತ ಮಾಲ್‌ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ಸ್ನೇಹ ಬೆಳೆಸುತ್ತಿದ್ದ. ಬಳಿಕ, ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ನಂಬಿಸುತ್ತಿದ್ದ. ನಂತರ ಖಾಸಗಿ ಹೊಟೇಲ್‌ಗಳಿಗೆ ಯುವತಿಯರನ್ನು ಕರೆದು ಅತ್ಯಾಚಾರ ಎಸಗುತ್ತಿದ್ದ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ, ಯುವತಿಯರ ಬಳಿಯಿದ್ದ ಮೊಬೈಲ್, ಹಣ, ಚಿನ್ನಾಭರಣಗಳನ್ನು ಸಹ ಕಸಿದು ಪರಾರಿಯಾಗುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಸಂತ್ರಸ್ತೆಯೊಬ್ಬರು ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈತನ ವಿರುದ್ಧ ವಂಚನೆ, ದರೋಡೆ, ಲೈಂಗಿಕ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳು ಹೊರ ರಾಜ್ಯಗಳಲ್ಲೂ ದಾಖಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News