×
Ad

ವಾಮ ಮಾರ್ಗದಿಂದ ಚುನಾವಣೆ ಎದುರಿಸುವ ಅಗತ್ಯ ನಮಗಿಲ್ಲ: ಡಿ.ವಿ.ಸದಾನಂದಗೌಡ

Update: 2019-11-22 19:34 IST

ಬೆಂಗಳೂರು, ನ.22: ವಾಮ ಮಾರ್ಗದಿಂದ ಉಪ ಚುನಾವಣೆಯನ್ನು ಎದುರಿಸುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತದಲ್ಲಿರುವ ಸಂದರ್ಭದಲ್ಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಪಡೆದಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಶುಕ್ರವಾರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿಗೆ ವಿರೋಧಿಗಳೆ ಇಲ್ಲದ ಚುನಾವಣೆ ಇದು. ನಮ್ಮ ಅಭ್ಯರ್ಥಿ ವೈಯಕ್ತಿಕ ವರ್ಚಸ್ಸು ಹೊಂದಿದ್ದು, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಏಕಮುಖವಾದ ಫಲಿತಾಂಶ ಬರುವುದು ನಿಶ್ಚಿತ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸ್ಥಿತಿಗೆ ತಲುಪಿದ್ದರೂ ಸಿದ್ದರಾಮಯ್ಯಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ ಎಂದು ಸದಾನಂದಗೌಡ ವ್ಯಂಗ್ಯವಾಡಿದರು.

ಉಪ ಚುನಾವಣೆಯ ಪ್ರಚಾರ ಕಣದಲ್ಲಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಪಕ್ಷದ ಯಾವೊಬ್ಬ ಹಿರಿಯ ನಾಯಕರು ಕಾಣುತ್ತಿಲ್ಲ. ಇನ್ನು ಜೆಡಿಎಸ್ ಪಕ್ಷದ 12 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅವರ ಕುಟುಂಬದವರೇ 8 ಜನ ಇದ್ದಾರೆ ಎಂದು ಅವರು ಹೇಳಿದರು.

ಹಿರೇಕೆರೂರು ಹಾಗೂ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರವನ್ನು ಬಲವಂತದಿಂದ ನಾವು ಹಿಂದಕ್ಕೆ ಪಡೆಸಿಲ್ಲ. ಈ ಹಿಂದೆ ರಾಮನಗರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್ ಅವರನ್ನು ಚುನಾವಣಾ ಕಣದಿಂದ ಹಿಂದಕ್ಕೆ ಸರಿಸಿದವರು ಯಾರು? ಅಂತಹ ಕೆಲಸಗಳಿಗೆ ನಮ್ಮ ಪಕ್ಷ ಕೈ ಹಾಕುವುದಿಲ್ಲ ಎಂದು ಸದಾನಂದಗೌಡ ತಿಳಿಸಿದರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಾವು-ಮುಂಗುಸಿ ರೀತಿಯಲ್ಲಿದ್ದರು. ಆದರೆ, ಯಾಕೋ ಇತ್ತೀಚೆಗೆ ಮತ್ತೆ ವರಸೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ಗೊತ್ತಿಲ್ಲ. ಈ ಉಪಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷ ನೆಲಸಮವಾದರೆ, ಜೆಡಿಎಸ್ ಪಕ್ಷ ರಾಜ್ಯದಿಂದ ಕಣ್ಮರೆಯಾಗಲಿದೆ ಎಂದು ಅವರು ಹೇಳಿದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಸಚಿವ ಎಸ್.ಸುರೇಶ್‌ಕುಮಾರ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಉಪಮೇಯರ್ ಹರೀಶ್ ಸೇರಿದಂತೆ ಇನ್ನಿತರರು ಪ್ರಚಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News