ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ: ಎಚ್.ಎಂ.ರೇವಣ್ಣ

Update: 2019-11-22 14:15 GMT

ಬೆಂಗಳೂರು, ನ.22: ಭ್ರಮೆಯಲ್ಲಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಶುಕ್ರವಾರ ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ಶಿವರಾಮ್ ಪರವಾಗಿ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಹಣವಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಭ್ರಮೆಯಲ್ಲಿ ಅನರ್ಹ ಶಾಸಕರಿದ್ದಾರೆ. ಆದರೆ, ಅಂತಹವರಿಗೆ ಮತದಾರರು ತಕ್ಕ ಉತ್ತರ ನೀಡಲು ಕಾತುರದಲ್ಲಿದ್ದಾರೆ. ಮತದಾನದ ದಿನದಂದು ಯಾರಿಗೆ ಮತ ಹಾಕಬೇಕು ಎಂಬುದು ಮತದಾರರೇ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿಯವರು ಅನ್ಯ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಕ್ಕೆ ಬಂದ ನಂತರದಿಂದ ಏನೂ ಅಭಿವೃದ್ಧಿ ಕೆಲಸಗಳು ಮಾಡಿಲ್ಲ. ಜನರಿಗೆ ಬೇಕಾಗಿರುವುದು ಸುಳ್ಳು ಆಶ್ವಾಸನೆಗಳಲ್ಲ, ಅಭಿವೃದ್ಧಿ. ಹೀಗಾಗಿ, ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ನುಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಮಾತನಾಡಿ, ಡಿಸೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಯಾಗಲಿದೆ. ಬಿಜೆಪಿ ಪಕ್ಷ ಸುಳ್ಳುಗಳ ಪಕ್ಷ. ಸುಳ್ಳು ಹೇಳುವುದರಲ್ಲಿ ಅವರಷ್ಟು ನಿಸ್ಸೀಮರು ಯಾರಿಲ್ಲ ಎಂದು ಟೀಕಿಸಿದರು.

ಕಳೆದ ಹಲವು ವರ್ಷಗಳಿಂದಲೂ ಸಾಕಷ್ಟು ಅನುದಾನ ಪಡೆದುಕೊಂಡಿದ್ದ ಅನರ್ಹ ಶಾಸಕರು, ಕೊನೆಗೆ ತಾವು ನಂಬಿದ ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹವೆಸಗಿದ್ದಾರೆ. ಅವರು ಮಾಡಿದ ದ್ರೋಹಕ್ಕೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News