ನಿರಂಜನಾನಂದಪುರಿ ಸ್ವಾಮೀಜಿಗೆ ಸಚಿವ ಮಾಧುಸ್ವಾಮಿ ಅಗೌರವ: ಕುರುಬರ ಸಂಘ ಆಕ್ರೋಶ

Update: 2019-11-22 14:19 GMT

ಬೆಂಗಳೂರು, ನ.22: ಕಾಗಿನೆಲೆ ಗುರುಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ ಕುರುಬ ಸಮುದಾಯದ ಜಗದ್ಗುರುಗಳಾದ ನಿರಂಜನಾನಂದಪುರಿ ಸ್ವಾಮೀಜಿಗೆ ಅಗೌರವ ತೋರಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್‌ಗಳಾದ ಹುಚ್ಚಪ್ಪ ಮತ್ತು ವೆಂಕಟೇಶಮೂರ್ತಿ ಅವರು ಸಚಿವ ಮಾಧುಸ್ವಾಮಿ ಸ್ವಾಮೀಜಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯದೇ ಅಗೌರವ ತೋರಿದ್ದಾರೆ. ಅವರ ನಡೆ ತೀವ್ರ ಖಂಡನೀಯ ಎಂದು ಆಪಾದಿಸಿದರು.

ಸಚಿವ ಮಾಧುಸ್ವಾಮಿ ಅವರಂತೆ ದರ್ಪ ಹಾಗೂ ದುರಹಂಕಾರವನ್ನು ಯಾವ ಸಚಿವರೂ, ಶಾಸಕರು ಪ್ರದರ್ಶಿಸಲಿಲ್ಲ ಎಂದ ಅವರು, ಚಿಕ್ಕನಾಯಕನಹಳ್ಳಿಯಲ್ಲಿ ಕನಕ ವೃತ್ತ ಎಂದು ನಾಮಕರಣ ಮಾಡಿರುವುದು ಹೊಸದಲ್ಲ. ಈ ಹಿಂದೆಯೇ ಹೆಸರು ನಿಗದಿ ಪಡಿಸಲಾಗಿತ್ತು. ಆದರೆ, ಮಾಧುಸ್ವಾಮಿ ಅನಗತ್ಯವಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಇಂದು ಇದ್ದಿದ್ದರೆ ಮಾಧುಸ್ವಾಮಿಯ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಕನಕದಾಸರು ನನಗಿಂತ ಹಿರಿಯರು, ಅವರ ಹೆಸರೇ ನಾಮಕರಣ ಮಾಡುವಂತೆ ಸಲಹೆ ನೀಡುತ್ತಿದ್ದರು ಎಂದು ಅವರು ಪ್ರತಿಪಾದಿಸಿದರು.

ಮಾಧುಸ್ವಾಮಿ ನಮ್ಮ ಸಮುದಾಯಕ್ಕೆ ಅಗೌರವ ತೋರಿದ್ದಾರೆ. ಅಲ್ಲದೆ, ಅನಗತ್ಯವಾಗಿ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಬೊಮ್ಮಾಯಿ ಸ್ವಾಮೀಜಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ, ಆದರೆ, ಮಾಧುಸ್ವಾಮಿ ತಮ್ಮ ಪಾಡಿಗೆ ತಾವು ನಿಂತಿದ್ದರು. ಇಂತಹ ದರ್ಪ ಒಳ್ಳೆಯದಲ್ಲ. ನಮ್ಮ ಸ್ವಾಮೀಜಿ ಮನಸ್ಸು ಮಾಡಿ ಪ್ರತಿಭಟನೆ ವಾಪಸ್ಸು ಪಡೆದಿದ್ದಾರೆ. ಇಲ್ಲದಿದ್ದರೆ, ರಾಜ್ಯಾದ್ಯಂತ ಕುರುಬ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು ಎಂದು ಅವರು ಎಚ್ಚರಿಸಿದರು.

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ್, ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪಿ.ರಾಜ್‌ಕುಮಾರ್, ಮಾರೇನಹಳ್ಳಿ ಡಾ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News