ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಅಭಿಪ್ರಾಯ ಕ್ರೋಡೀಕರಣ: ನ್ಯಾ.ನಾಗಮೋಹನ ದಾಸ್

Update: 2019-11-22 14:23 GMT

ಬೆಂಗಳೂರು, ನ.22: ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ರಾಜಕೀಯ ಪಕ್ಷಗಳು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ನಿವೃತ್ತ ನ್ಯಾ.ನಾಗಮೋಹನ ದಾಸ್ ತಿಳಿಸಿದ್ದಾರೆ.

ಶುಕ್ರವರ ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಕುರಿತು ನಗರದ ಯವನಿಕಾದಲ್ಲಿ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಕಾನೂನು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕತೆ ಸೇರಿದಂತೆ ವಿವಿಧ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಅಗತ್ಯವಿದೆ ಎಂದು ತಿಳಿಸಿದರು.

1950ರಲ್ಲಿ ಜಾರಿಯಾದ ಮೀಸಲಾತಿಯ ಪ್ರಮಾಣವನ್ನೇ ಇಂದಿಗೂ ಜಾರಿ ಮಾಡಿಕೊಂಡು ಬರಲಾಗುತ್ತಿದೆ. ಕರ್ನಾಟಕ ಏಕೀಕರಣವಾದ ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜನಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ, ಹಿಂದುಳಿದ ವರ್ಗಗಳಲ್ಲಿದ್ದ ಹಲವು ಜಾತಿಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಇವೆಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ವರದಿ ಸಲ್ಲಿಸುವಂತೆ ನಿವೃತ್ತ ನ್ಯಾ.ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ಈ ಆಯೋಗವು ತರಾತುರಿಯಲ್ಲಿ ವರದಿಯನ್ನು ಸಿದ್ಧಪಡಿಸದೆ ಕೂಲಂಕಷವಾಗಿ, ಎಲ್ಲ ಆಯಾಮದಲ್ಲೂ ಅಧ್ಯಯನ ನಡಿಸಿ ಐತಿಹಾಸಿಕವಾದ ವರದಿಯೊಂದನ್ನು ನೀಡಬೇಕೆಂದು ಮನವಿ ಮಾಡಿದರು.

ಮೀಸಲಾತಿ ಹೆಚ್ಚಳ ಸಂಬಂಧದ ವರದಿಯನ್ನು ಕಾಲಮಿತಿಯಲ್ಲಿ ಕೊಡಬೇಕೆಂದು ರಾಜ್ಯ ಸರಕಾರ ಒತ್ತಡ ಹಾಕುವುದು ಸರಿಯಲ್ಲ. ಇದೊಂದು ಗಂಭೀರವಾದ ವಿಷಯವಾಗಿರುವುದರಿಂದ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಹಾಗೂ ನಾಗಮೋಹನ್ ದಾಸ್ ಆಯೋಗಕ್ಕೆ ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಸದಸ್ಯರು, ಪರಿಶಿಷ್ಟ ಪಂಗಡದ ಇಬ್ಬರು ಸದಸ್ಯರನ್ನು ನೇಮಿಸಿಕೊಂಡು ವಿಸ್ತೃತವಾದ ವರದಿಯನ್ನು ತಯಾರಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

ಸಿಪಿಎಂ ಪಕ್ಷದ ಜಿ.ಎನ್.ನಾಗರಾಜ್ ಮಾತನಾಡಿ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವುದು ಅಗತ್ಯವಾಗಿದೆ. ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕು. ಹಾಗೂ ಬುಡಕಟ್ಟು ಮಹಿಳೆ ಮೀಸಲಾತಿ ಹಂಚಿಕೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆರ್‌ಪಿಐ(ಪ್ರಕಾಶ್ ಅಂಬೇಡ್ಕರ್) ರಾಜ್ಯಾಧ್ಯಕ್ಷ ಆರ್.ಮೋಹನರಾಜ್, ಬಸವರಾಜ್ ಕೌತಾಳ್, ಬಿ.ಗೋಪಾಲ್, ಸಿಪಿಐನ ಸಾಥಿ ಸುಂದರೇಶ್, ಅನಂತ್ ನಾಯ್ಕ, ಜೆಡಿಎಸ್ ಮುಖಂಡ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸರಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಎಲ್ಲ ಸಮುದಾಯಗಳ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಇವತ್ತು ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಉತ್ತಮವಾದ ಸಲಹೆ ಹಾಗೂ ಮಾಹಿತಿಗಳು ಸಿಕ್ಕಿವೆ. ಇದೇ ಮಾದರಿಯಲ್ಲಿ ಎಲ್ಲ ಪ್ರದೇಶಗಳಲ್ಲೂ ಸಭೆ ನಡೆಸಲಾಗುವುದು. ಹಾಗೂ ಸಾರ್ವಜನಿಕರು ಡಿ.10ರ ಒಳಗೆ ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗಕ್ಕೆ ಪತ್ರದ ಮುಖೇನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ.

-ನಾಗಮೋಹನ ದಾಸ್, ನಿವೃತ್ತ ನ್ಯಾಯಮೂರ್ತಿ

ಕೆನೆ ಪದರಕ್ಕೆ ವಿರೋಧ

ಈಗಾಗಲೇ ಮೀಸಲಾತಿಯನ್ನು ಅನುಭವಿಸಿ ಸಬಲರಾಗಿರುವವರಿಗೆ ಮೀಸಲಾತಿಯಿಂದ ಹೊರಗಿಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ನಮ್ಮ ಸಮಾಜದಲ್ಲಿ ಎಸ್ಸಿ, ಎಸ್ಟಿ ಸಮುದಾಯ ಆರ್ಥಿಕವಾಗಿ ಎಷ್ಟೇ ಸಬಲರಾಗಿದ್ದರೂ ಅಸ್ಪೃಶ್ಯತೆಯಿಂದ ಮುಕ್ತರಾಗುವುದಿಲ್ಲ. ಹೀಗಾಗಿ ಕೆನೆ ಪದರದ ನೆಪದಲ್ಲಿ ಮೀಸಲಾತಿಯನ್ನು ವಂಚಿಸಿದರೆ, ಇಡೀ ದಲಿತ ಸಮುದಾಯ ಮತ್ತಷ್ಟು ಅವಕಾಶಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಮೀಸಲಾತಿ ಹೆಚ್ಚಳ ಸಂಬಂಧ ರಚನೆಗೊಂಡಿರುವ ನ್ಯಾ.ನಾಗಮೋಹನ್‌ದಾಸ್ ಆಯೋಗವು, ಈ ಕೆನೆ ಪದರವನ್ನು ಯಾವುದೇ ಕಾರಣಕ್ಕೂ ಒಪ್ಪಬಾರದೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News