ಅನರ್ಹ ಶಾಸಕರ ಜೊತೆ ಗುರುತಿಸಿಕೊಳ್ಳುತ್ತಿರುವ 'ಕೈ' ಸದಸ್ಯರ ಉಚ್ಚಾಟನೆಗೆ ಚಿಂತನೆ ?

Update: 2019-11-22 14:34 GMT

ಬೆಂಗಳೂರು, ನ.22: ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಸದಸ್ಯರಾಗಿ ಆಯ್ಕೆಯಾಗಿದ್ದವರು ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಅನರ್ಹ ಶಾಸಕರೊಂದಿಗೆ ಗುರುತಿಸಿಕೊಳ್ಳುತ್ತಿರುವ ಸದಸ್ಯರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.

ಇತ್ತೀಚಿಗೆ ನಡೆದ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿಪ್ ಪಾಲನೆ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಪರವಾಗಿ ಮತ ಚಲಾವಣೆ ಮಾಡಿದ್ದರು. ಆದರೆ, ಈಗ ಅನರ್ಹ ಶಾಸಕರ ಬೆಂಬಲಿಗರೆಲ್ಲರೂ, ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೈಗೊಳ್ಳುವ ತೀರ್ಮಾನವನ್ನು ಆಧರಿಸಿ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗುತ್ತದೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ.

ಮೇಲ್ನೋಟಕ್ಕೆ ಉಚ್ಚಾಟನೆಯ ಮಾತುಗಳನ್ನು ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೂ, ಕ್ರಮ ಕೈಗೊಳ್ಳುವುದು ಅನುಮಾನ ಎನ್ನಲಾಗುತ್ತಿದ್ದು, ಉಚ್ಚಾಟನೆ ಮಾಡಿದರೆ ಅವರ ಸದಸ್ಯತ್ವಕ್ಕೆ ಧಕ್ಕೆಯಾಗುವುದಿಲ್ಲ. ಆಗ ಬಿಜೆಪಿ ಜತೆಗೆ ಮತ್ತಷ್ಟು ಗುರುತಿಸಿಕೊಂಡು ಸ್ಥಾಯಿ ಸಮಿತಿಗಳಲ್ಲಿ ಸ್ಥಾನ ಪಡೆಯಲೂಬಹುದು. ಹಾಗಾಗಿ, ಉಚ್ಚಾಟನೆ ಮಾಡದೇ ಇರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News