ಬೆನ್ನುನೋವು ಮತ್ತು ಶ್ವಾಸಕೋಶ ಕ್ಯಾನ್ಸರ್ ನಡುವಿನ ಸಂಬಂಧ ಗೊತ್ತೇ?

Update: 2019-11-22 14:36 GMT

ಯಾವುದೇ ಕಾಯಿಲೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಅದರ ಬಗ್ಗೆ ಮುನ್ನರಿವು ಅಗತ್ಯ. ಇದೇ ಕಾರಣದಿಂದ ಕಾಯಿಲೆಗಳ ಲಕ್ಷಣಗಳ ಕುರಿತು ಅರಿವು ಇರುವುದು ಅಗತ್ಯವಾಗುತ್ತದೆ. ಇದರಿಂದ ರೋಗಿಯ ರೋಗನಿರ್ಧಾರವನ್ನು ಸಕಾಲದಲ್ಲಿ ಪತ್ತೆ ಹಚ್ಚಲು ಮತ್ತು ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ಆದರೆ ಹೆಚ್ಚಿನ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿ ಕೆಲವೇ ಲಕ್ಷಣಗಳನ್ನು ತೋರಿಸುತ್ತವೆ. ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುವಾಗ ರೋಗವು ಆಗಲೇ ಮುಂದುವರಿದ ಹಂತವನ್ನು ತಲುಪಿರುತ್ತದೆ.

ಶ್ವಾಸಕೋಶ ಕ್ಯಾನ್ಸರ್ ಇರುವುದು ದೃಢಪಟ್ಟಿರುವ ರೋಗಿಗಳು ತಮ್ಮ ಬೆನ್ನಿನ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಅವರ ರೋಗದ ಸ್ಥಿತಿಯು ಗಂಭೀರವಾಗಿದೆಯೇ ಇಲ್ಲವೇ ಎನ್ನುವುದನ್ನು ಬೆನ್ನು ನೋವು ಸೂಚಿಸಬಲ್ಲದು. ಕೆಲವೊಮ್ಮೆ ನೀವು ಭಾರದ ವಸ್ತುಗಳನ್ನು ಎತ್ತಿದಾಗ ಸ್ವಲ್ಪ ಸಮಯದ ಬಳಿಕ ಬೆನ್ನುನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಆದರೆ ಅಂತಹ ಯಾವುದೇ ತೊಂದರೆ ತೆಗೆದುಕೊಳ್ಳದೆ ಆಗಾಗ್ಗೆ ಬೆನ್ನುನೋವು ಕಾಣಿಸಿಕೊಳ್ಳುತ್ತಿದ್ದರೆ ನೀವು ಆ ಬಗ್ಗೆ ಗಮನವನ್ನು ಹರಿಸಬೇಕಾಗುತ್ತದೆ. ಅನಿರೀಕ್ಷಿತ ಬೆನ್ನುನೋವು ನೀವು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಕಾಣಬೇಕು ಎಂದು ಸೂಚಿಸುವ ಎಚ್ಚರಿಕೆಯ ಗಂಟೆಯಾಗಿರುತ್ತದೆ.

ವ್ಯಕ್ತಿಗೆ ಬೆನ್ನುನೋವು ಬಂದಾಗ ಅದು ಕ್ಯಾನ್ಸರ್‌ನ್ನೂ ಸೂಚಿಸಬಹುದು ಎನ್ನುವುದನ್ನು ಯಾರೂ ಯೋಚನೆಯನ್ನೇ ಮಾಡಿರುವುದಿಲ್ಲ. ಬೆನ್ನುನೋವು ಸಾಮಾನ್ಯವಾಗಿ ಸ್ನಾಯು ಸೆಳೆತ,ಸಂಧಿವಾತ ಮತ್ತು ಅಸ್ಥಿರಂಧ್ರತೆಯೊಂದಿಗೆ ಗುರುತಿಸಿಕೊಂಡಿರುತ್ತದೆ. ಆದರೆ ಬೆನ್ನುನೋವಿಗೆ ಇವೇ ಯಾವಾಗಲೂ ಕಾರಣಗಳಾಗಿರಬೆಕು ಎಂದಿಲ್ಲ. ಅಧ್ಯಯನ ವರದಿಗಳಂತೆ ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿರುವ ಪ್ರತಿ ನಾಲ್ವರು ರೋಗಿಗಳಲ್ಲಿ ಓರ್ವ ರೋಗನಿರ್ಧಾರದ ಯಾವುದಾದರೊಂದು ಸಮಯದಲ್ಲಿ ಬೆನ್ನುನೋವಿನಿಂದ ಬಳಲಿರುತ್ತಾನೆ. ಬೆನ್ನಿನಲ್ಲಿಯ ನೋವು ಕ್ಯಾನ್ಸರ್ ಗಡ್ಡೆ ಬೆನ್ನುಮೂಳೆಯವರೆಗೆ ಹರಡಿದೆ ಅಥವಾ ಅದು ಬೆನ್ನುಮೂಳೆಯ ನರಗಳನ್ನು ಒತ್ತುತ್ತಿದೆ ಎನ್ನುವುದನ್ನು ಸೂಚಿಸುತ್ತಿರಬಹುದು.

► ಶ್ವಾಸಕೋಶ ಕ್ಯಾನ್ಸರ್‌ನ್ನು ಸೂಚಿಸುವ ಬೆನ್ನುನೋವಿನ ಲಕ್ಷಣಗಳು

ಶ್ವಾಸಕೋಶ ಕ್ಯಾನ್ಸರ್‌ನ್ನು ಸೂಚಿಸುವ ಬೆನ್ನುನೋವಿನ ಲಕ್ಷಣಗಳು ಇತರ ಸ್ಥಿತಿಗಳೊಂದಿಗೆ ಗುರುತಿಸಿಕೊಂಡಿರುವ ಬೆನ್ನುನೋವಿನೊಂದಿಗೆ ಗುರುತಿಸಿಕೊಂಡಿರುವ ಲಕ್ಷಣಗಳಂತೆಯೇ ಇರುತ್ತವೆ. ಆದರೆ ಶ್ವಾಸಕೋಶ ಕ್ಯಾನ್ಸರ್‌ನ್ನು ಸೂಚಿಸುವ ಬೆನ್ನುನೋವು ಕೆಲವು ವಿಶಿಷ್ಟ ಲಕ್ಷಣಗಳನ್ನು ತೋರಿಸಬಹುದು. ಚಿಕಿತ್ಸೆ ಪಡೆದರೂ ಗುಣವಾಗದ ನೋವು,ರಾತ್ರಿಯ ವೇಳೆ ತೀವ್ರಗೊಳ್ಳುವ ನೋವು,ಯಾವುದೇ ಚಟುವಟಿಕೆಗಳನ್ನು ನಡೆಸದಿದ್ದರೂ ವಿವರಿಸಲಾಗದಂತಹ ಬೆನ್ನುನೋವು,ದೀರ್ಘವಾಗಿ ಉಸಿರಾಡಿದಾಗ ಹೆಚ್ಚಾಗುವ ನೋವು,ದೀರ್ಘ ಸಮಯ ಹಾಸಿಗೆಯಲ್ಲಿ ಮಲಗಿದ್ದರೆ ಇನ್ನಷ್ಟು ಬಿಗಡಾಯಿಸುವ ಬೆನ್ನುನೋವು ಇವು ಇಂತಹ ವಿಶಿಷ್ಟ ಲಕ್ಷಣಗಳಲ್ಲಿ ಸೇರಿವೆ.

ನಿರಂತರ ಕೆಮ್ಮು,ಉಸಿರಾಟದ ತೊಂದರೆ,ತೂಕ ಇಳಿಕೆ,ದೀರ್ಘಕಾಲಿಕ ಬಳಲಿಕೆ,ಕೆಮ್ಮಿದಾಗ ರಕ್ತ ಬರುವುದು,ನಿರಂತರ ತಲೆನೋವು,ಹಸಿವು ಕಡಿಮೆಯಾಗುವುದು,ಕುತ್ತಿಗೆ ಅಥವಾ ಮುಖದಲ್ಲಿ ಊತ ಮತ್ತು ಉಬ್ಬಸ ಇವು ಇತರ ಲಕ್ಷಣಗಳಲ್ಲಿ ಸೇರಿವೆ.

► ಬೆನ್ನುನೋವಿನ ರೋಗನಿರ್ಣಯ

ಬೆನ್ನುನೋವಿನೊಂದಿಗೆ ಈ ಮೇಲಿನ ಯಾವುದೇ ಲಕ್ಷಣಗಳಿದ್ದರೆ ವೈದ್ಯರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವುದು ಅಗತ್ಯವಾಗುತ್ತದೆ. ಬೆನ್ನುನೋವಿಗೆ ಕಾರಣವನ್ನು ಗುರುತಿಸಲು ವೈದ್ಯರು ಸಿಟಿ ಸ್ಕಾನ್,ಎಂಆರ್‌ಐ ಸ್ಕಾನ್,ಎಕ್ಸರೇ,ಪಿಇಟಿ ಸ್ಕಾನ್ ಇತ್ಯಾದಿ ತಪಾಸಣೆಗಳೊಂದಿಗೆ ಕ್ಯಾಲ್ಸಿಯಂ ಮಟ್ಟವನ್ನು ತಿಳಿದುಕೊಳ್ಳಲು ರಕ್ತಪರೀಕ್ಷೆಗಳನ್ನು ನಡೆಸುತ್ತಾರೆ.

► ಶ್ವಾಸಕೋಶ ಕ್ಯಾನ್ಸರ್ ಹರಡುವುದನ್ನು ತಡೆಯುವುದು ಹೇಗೆ?

ಯಾವುದೇ ರೋಗವಿರಲಿ,ಸಕಾಲದಲ್ಲಿ ರೋಗನಿರ್ಣಯವು ಪರಿಣಾಮಕಾರಿ ಚಿಕಿತ್ಸೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಆದರೆ ಶ್ವಾಸಕೋಶ ಕ್ಯಾನ್ಸರ್ ಆರಂಭದ ಹಂತಗಳಲ್ಲಿ ಕೆಲವೇ ಲಕ್ಷಣಗಳನ್ನು ತೋರಿಸುತ್ತದೆ. ವೈದ್ಯರು ಇತರ ಯಾವುದೋ ರೋಗದ ತಪಾಸಣೆ ನಡೆಸುವಾಗ ಮಾತ್ರ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗುತ್ತದೆ. ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಶ್ವಾಸಕೋಶಗಳಿಗೆ ಹಾನಿಯನ್ನು ತಡೆಗಟ್ಟಬಹುದು.

ನೀವು ಧೂಮ್ರಪಾನಿಗಳಾಗಿದ್ದರೆ ಅದನ್ನು ಮೊದಲು ವರ್ಜಿಸಿ,ಧೂಮ್ರಪಾನಿಗಳಲ್ಲದಿದ್ದರೂ ಇತರರು ಸಿಗರೇಟ್,ಬೀಡಿ ಸೇದುತ್ತಿದ್ದರೆ ಅಲ್ಲಿಂದ ಜಾಗ ಖಾಲಿ ಮಾಡಿ. ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲಸದ ಸ್ಥಳಗಳಲ್ಲಿ ಕ್ಯಾನ್ಸರ್ ಕಾರಕಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ಗಳನ್ನು ಧರಿಸಿ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿದ ಸಮತೋಲಿತ ಆಹಾರವನ್ನು ಸೇವಿಸಿ. ನಿಯಮಿತ ವ್ಯಾಯಾಮವಿರಲಿ. ಅತಿಯಾದ ಮದ್ಯಸೇವನೆಯ ದುಶ್ಚಟವಿದ್ದರೆ ಅದಕ್ಕೆ ಗುಡ್‌ಬೈ ಹೇಳಿ.

► ಅಂತಿಮ ಷರಾ

ವಿವರಿಸಲು ಸಾಧ್ಯವಿಲ್ಲದ ಬೆನ್ನುನೋವಿನಿಂದ ನರಳುತ್ತಿದ್ದರೆ ಕಾಯಿಲೆಯು ಹೆಚ್ಚುವುದನ್ನು ತಡೆಯಲು ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗುತ್ತದೆ. ಬೇಗನೇ ರೋಗವು ಪತ್ತೆಯಾದರೆ ಮಾರಣಾಂತಿಕ ರೋಗದಿಂದ ಚೇತರಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News