ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ: ಆರ್.ಅಶೋಕ್

Update: 2019-11-22 15:11 GMT

ಬೆಂಗಳೂರು, ನ.22: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಈ ಎರಡೂ ಪಕ್ಷಗಳು ಉಪ ಚುನಾವಣೆಯಲ್ಲಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಚಾರದಲ್ಲಿ ಇನ್ನು ಟೇಕಾಫ್ ಆಗಿಯೇ ಇಲ್ಲ. ಸಿದ್ದರಾಮಯ್ಯ ಅವರದ್ದು ‘ಒನ್ ಮ್ಯಾನ್ ಷೋ’ ಆಗಿದೆ. ಡಿ.ಕೆ.ಶಿವಕುಮಾರ್, ಪರಮೇಶ್ವರ್, ಹರಿಪ್ರಸಾದ್ ಹಾಗೂ ಕೆ.ಎಚ್.ಮುನಿಯಪ್ಪ ಅವರ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ ಎಂದರು.

ಜೆಡಿಎಸ್‌ಗೆ 15 ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಕಣದಲ್ಲಿದ್ದ ಅಭ್ಯರ್ಥಿಗಳು ಹಿಂದೆ ಸರಿಯುತ್ತಿದ್ದಾರೆ. ಸೋಲಿನ ಭಯದಿಂದ ಕೆಲವೆಡೆ ಜೆಡಿಎಸ್ ಗೂಂಡಾಗಿರಿ ನಡೆಸುತ್ತಿದೆ. ಜೆಡಿಎಸ್ ರಾಷ್ಟ್ರೀಯ ಪಕ್ಷವೇ ಅಥವಾ ಪ್ರಾದೇಶಿಕ ಪಕ್ಷವೇ ಎಂಬುದೇ ಅರ್ಥವಾಗುತ್ತಿಲ್ಲ. ದಿನಕ್ಕೊಂದು ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‌ಐ, ಕೆಎಫ್‌ಡಿ ಕಾರ್ಯಕರ್ತರ ಮೇಲಿದ್ದ ನೂರಾರು ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ಆರು ವರ್ಷಗಳ ಆಡಳಿತದಲ್ಲಿ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸಾಚಾರಕ್ಕೆ ಇಳಿಯುವ ಈ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರಿಂದ ಅವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ ಎಂದು ಅಶೋಕ್ ಆರೋಪಿಸಿದರು. ಈ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ, ಮೃದು ಧೋರಣೆ ತೋರಿದ್ದರಿಂದ ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಪಿಎಫ್‌ಐ ಕಾರ್ಯಕರ್ತನಿಂದ ಮಾರಾಣಾಂತಿಕ ಹಲ್ಲೆ ನಡೆದಿದೆ ಎಂದು ಅವರು ದೂರಿದರು.

ನನ್ನನ್ನು ಅತೀ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಏನೋ ಬಹುಮಾನ ಕೊಡುತ್ತೇನೆ ಎಂದು ಭರವಸೆ ನೀಡಿರಬಹುದು ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಅಮಿತ್ ಶಾಗೆ ಸಿದ್ದರಾಮಯ್ಯ ಯಾರು ಅನ್ನೋದೆ ಗೊತ್ತಿಲ್ಲ. ಮೊದಲು ಅವರು ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿ ಭೇಟಿಗೆ ಅವಕಾಶ ಗಿಟ್ಟಿಸಿಕೊಳ್ಳಲಿ ಎಂದರು.

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಗೆದ್ದೆ ಗೆಲ್ಲುತ್ತಾರೆ. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು, ಮತ್ತೆ ಅವರನ್ನು ಸೇರಿಸಿಕೊಳ್ಳುವ ಮಾತೇ ಇಲ್ಲ. ಸಂಸದ ಬಿ.ಎನ್.ಬಚ್ಚೇಗೌಡ, ತಮ್ಮ ಮಗನ ಪರವಾಗಿ ಮುಖಂಡರ ಸಭೆಗಳನ್ನು ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಕೇಂದ್ರದ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ಅಶೋಕ್ ಹೇಳಿದರು.

ಶರತ್ ಈಗಾಗಲೇ ದಾರಿ ತಪ್ಪಿದ್ದಾರೆ. ಆದರೆ, ಅವರ ತಂದೆ ಬಚ್ಚೇಗೌಡ ಇನ್ನೂ ದಾರಿ ತಪ್ಪಿಲ್ಲ ಎಂಬುದು ನಮ್ಮ ಅನಿಸಿಕೆ. ಒಂದು ವೇಳೆ ಅವರು ದಾರಿ ತಪ್ಪಿ ನಡೆದರೆ, ಯಾರೂ ಎಷ್ಟೇ ದೊಡ್ಡವರಾಗಿದ್ದರೂ ಪಕ್ಷವು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿದೆ ಎಂದು ಅಶೋಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News