ಕನ್ನಡ ಅತ್ಯಂತ ಪುರಾತನವ ಭಾಷೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ

Update: 2019-11-22 16:17 GMT

ಬೆಂಗಳೂರು, ನ.22: ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಅತ್ಯಂತ ಪುರಾತನವಾಗಿದ್ದು, ತನ್ನದೆ ಆದ ಲಿಪಿಯನ್ನು ಹೊಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿನ ಜಲಮಂಡಳಿ ರಜತ ಭವನದಲ್ಲಿ ಬೆಂಗಳೂರು ಜಲಮಂಡಳಿ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತೃ ಭಾಷೆಯಿಂದ ಮಾತ್ರ ಸಾಧ್ಯ. ಅದು ಹೃದಯಕ್ಕೆ ಹತ್ತಿರವಾದಂತಹ ಭಾವನಾತ್ಮಕ ಭಾಷೆಯಾಗಿರುತ್ತದೆ. ಕನ್ನಡ ನಾಡು, ನುಡಿ, ಜಲದ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಬ್ರಿಟೀಷರ ದಾಸ್ಯದಿಂದ ಹೊರಬಂದರೂ ಇಂಗ್ಲೀಷ್ ಭಾಷೆಯ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲೀಷ್ ಭಾಷೆಯನ್ನು ವ್ಯಾವಹಾರಿಕ ಭಾಷೆ ಮತ್ತು ಔದ್ಯೋಗಿಕ ಉದ್ದೇಶಕ್ಕಾಗಿ ಸೀಮಿತಗೊಳಿಸಬೇಕಾಗಿರುತ್ತದೆ ಎಂದು ನಾಗಾಭರಣ ಅಭಿಪ್ರಾಯಪಟ್ಟರು.

ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಮಾತನಾಡಿ, ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆ ಆದ ನಂತರ ಕರ್ನಾಟಕ ರಾಜ್ಯ ಎಂದು ನಾಮಕರಣವಾಯಿತು. ಭಾಷೆ ಮತ್ತು ಜೀವನ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ ಎಂದರು.

ಜೀವನದಲ್ಲಿ ಬದಲಾವಣೆಯಾದಂತೆ ಭಾಷೆಯಲ್ಲೂ ಬದಲಾವಣೆಯಾಗುತ್ತಾ ಬಂದಿದ್ದು, ಭಾಷೆಯನ್ನು ಉಳಿಸಿ-ಬೆಳಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಮಂಡಳಿಯ ನೌಕರರನ್ನು ಹಾಗೂ ಅವರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಮಂಡಳಿಯ ಅಧಿಕಾರಿ ಮತ್ತು ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ವಿತರಿಸಿ, ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಕೆಂಪರಾಮಯ್ಯ, ಮುಖ್ಯ ಆಡಳಿತಾಧಿಕಾರಿ ಕೃಷ್ಟಗೌಡ ತಾಯಣ್ಣವರ್, ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿಎ. ಗೋವಿಂದ ರಾಜು ಸೇರಿದಂತೆ ಹಲವರಿದ್ದರು.

‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದು ಸಾರ್ವಕಾಲಿಕವಾಗಬೇಕು. ಕನ್ನಡವನ್ನು ಕಲಿಸುವುದರ ಜೊತೆಯಲ್ಲಿ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಮುಂದಿನ ಪೀಳಿಗೆಗೆ ಭಾಷೆಯ ಪ್ರಾಧಾನ್ಯತೆಯನ್ನು ತಿಳಿಸಿಕೊಡಬೇಕಾಗಿರುತ್ತದೆ’

-ಟಿ.ಎಸ್.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News