ಕಾಂಗ್ರೆಸ್-ಜೆಡಿಎಸ್‌ನಿಂದ ಗೊಂದಲ ಸೃಷ್ಟಿಸುವ ಪ್ರಯತ್ನ: ಡಿ.ವಿ.ಸದಾನಂದಗೌಡ

Update: 2019-11-23 14:19 GMT

ಬೆಂಗಳೂರು, ನ.23: ವಿಧಾನಸಭಾ ಉಪ ಚುನಾವಣೆಯಲ್ಲಿ ಹಲವಾರು ಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಕಾವು ಏರತೊಡಗಿದ್ದು, ಕಳೆದ ಹಲವು ದಿನಗಳಿಂದ ರಾಜಕೀಯ ವಿದ್ಯಮಾನಗಳು ತಿರುವು ತೆಗೆದುಕೊಳ್ಳುತ್ತಿವೆ ಎಂದರು.

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಕ್ಷಗಳು ಸಿದ್ಧಾಂತಗಳನ್ನು ಬಿಟ್ಟು ಗೌರವ ಉಳಿಸಿಕೊಳ್ಳಲು ಕಾರ್ಯಮಗ್ನವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಸುತ್ತಿವೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಇಂತಹ ಪ್ರಯತ್ನ ನಡೆಸಲಾಗಿದ್ದು, ಗೂಂಡಾಗಿರಿಯನ್ನು ಶುರು ಮಾಡಲಾಗಿದೆ ಎಂದು ಅವರು ದೂರಿದರು.

ಹೊಸಕೋಟೆಯಲ್ಲೂ ಇಂತಹದೇ ಯತ್ನಗಳು ನಡೆಯುತ್ತಿದೆ. ಕೆ.ಆರ್.ಪುರ, ಯಶವಂತಪುರ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಸ್ಪರ್ಧೆಯೊಡ್ಡುವ ಎದುರಾಳಿಯೇ ಇಲ್ಲವಾಗಿದ್ದಾರೆ. ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಹಾಗೂ ಹೊಸಕೋಟೆ ಕ್ಷೇತ್ರಗಳನ್ನು ಸೂಕ್ಷ್ಮವೆಂದು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು. ಎಚ್.ಡಿ.ಕುಮಾರಸ್ವಾಮಿ ಪರಿಶ್ರಮದ ಬಗ್ಗೆ ಮಾತನಾಡುತ್ತಾರೆ. ಆದರೆ, ಯಾವುದೇ ಪರಿಶ್ರಮವಿಲ್ಲದೆ ಅಧಿಕಾರಕ್ಕೆ ಏರಿದವರು ಎಂದು ಅವರು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ತಾವು ಕುರಿ ಮೇಯಿಸಿ, ಶ್ರಮಪಟ್ಟು ಉನ್ನತ ಸ್ಥಾನದವರೆಗೆ ಏರಿರುವುದಾಗಿ ಹೇಳುತ್ತಾರೆ. ಆದರೆ, ಉನ್ನತ ಸ್ಥಾನಕ್ಕೆ ಏರಿದ ಮೇಲೆ ಲಕ್ಷಾಂತರ ರೂ. ಮೌಲ್ಯದ ಹೂಬ್ಲೊಟ್ ಕೈಗಡಿಯಾರ, ಐಷಾರಾಮಿ ಕಾರು ಬಯಸಿ ಕೆ.ಜೆ.ಜಾರ್ಜ್ ಅಂತಹವರಿಂದ ಉಡುಗೊರೆಯಾಗಿ ಪಡೆಯುತ್ತಾರೆ ಎಂದು ಅವರು ಟೀಕಿಸಿದರು.

ನನ್ನ ರಸಗೊಬ್ಬರ ಖಾತೆಯ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಇದು ರೈತರಿಗೆ ಮಾಡಿದ ಅಪಮಾನವಾಗಿದೆ. ಕೇಂದ್ರ ಸರಕಾರ 80 ಸಾವಿರ ಕೋಟಿ ರೂ.ಹಣವನ್ನು ಸಬ್ಸಿಡಿಯಾಗಿ ನೀಡಿದೆ. ದೇಶದ ಯಾವುದೇ ಭಾಗದಲ್ಲಿ ಗೊಬ್ಬರ ಕೊರತೆ ಇಲ್ಲ. ಸಿದ್ದರಾಮಯ್ಯ ಉನ್ನತ ಸ್ಥಾನದಲ್ಲಿದ್ದರೂ, ದುರಹಂಕಾರದ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದಲೇ ಅವರೊಟ್ಟಿಗೆ ಯಾರೊಬ್ಬರೂ ಇಲ್ಲದೆ, ಏಕಾಂಗಿಯಾಗಿದ್ದಾರೆ ಎಂದು ಸದಾನಂದಗೌಡ ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಸರಕಾರ ರಚನೆಯಾಗಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದ ಹಿತದೃಷ್ಟಿಯಿಂದ ಸ್ಥಿರ ಸರಕಾರ ಅಗತ್ಯವಿತ್ತು. ಇನ್ನು ಐದಾರು ತಿಂಗಳಲ್ಲಿ ಶಿವಸೇನೆ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಬಿಜೆಪಿ ಮಾಧ್ಯಮ ಸಂಚಾಲಕರಾದ ಎ.ಎಚ್.ಆನಂದ್, ರಾಜ್ಯ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News