ಎಂಟಿಬಿ ನಾಗರಾಜ್ ವಿರುದ್ಧ ಮಹಿಳೆಯರು ಮತ ಚಲಾಯಿಸಬೇಕು: ಮಾಜಿ ಸಚಿವೆ ಮೋಟಮ್ಮ
ಬೆಂಗಳೂರು, ನ.23: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಮಹಿಳೆಯರಿಗೆ ಅಗೌರವ ತೋರಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಈ ಉಪ ಚುನಾವಣೆಯಲ್ಲಿ ಮಹಿಳೆಯರು ಅವರ ವಿರುದ್ಧ ಮತ ಚಲಾಯಿಸಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಕರೆ ನೀಡಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಗರಾಜ್ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಮಹಿಳಾ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಈ ಮಹಿಳೆ ರಾಜಕೀಯ ಕ್ಷೇತ್ರದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಮಹಿಳಾ ಕುಲಕ್ಕೆ ಮಾಡಿರುವ ಅಪಮಾನ ಎಂದರು.
ಮಹಿಳೆಯರ ಜವಾಬ್ದಾರಿ ಎಷ್ಟಿದೇ ಎಂಬುದನ್ನು ನಾಗರಾಜ್ ಅರ್ಥ ಮಾಡಿಕೊಳ್ಳಬೇಕು. ಬೇರೆ ಮಹಿಳೆಯರ ಬಗ್ಗೆ ಅಪಮಾನಕರ ಹೇಳಿಕೆ ನೀಡುವ ಮುನ್ನ, ತಮ್ಮ ಪತ್ನಿ, ತಾಯಿಯ ಸಾಮರ್ಥ್ಯ ಏನು? ಯಾವ ರೀತಿಯಲ್ಲಿ ಮನೆ, ಸಂಸಾರವನ್ನು ಅವರು ನಿರ್ವಹಿಸಿದ್ದಾರೆ ಎಂಬುದನ್ನು ನೋಡಲಿ ಎಂದು ಮೋಟಮ್ಮ ಹೇಳಿದರು.
ಹೆಣ್ಣು ಮಕ್ಕಳಿಗೆ ಆತ್ಮಾಭಿಮಾನ, ಸ್ವಾಭಿಮಾನ ಇದ್ದರೆ ನಾಗರಾಜ್‌ಗೆ ಈ ಉಪ ಚುನಾವಣೆಯಲ್ಲಿ ಮತ ಹಾಕಬಾರದು. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಬೇಕು, ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಹೋರಾಟ ನಡೆಯುತ್ತಿದೆ. ಸೇನೆಗೂ ಮಹಿಳೆಯರು ಸೇರುತ್ತಿದ್ದಾರೆ. ಶಿಕ್ಷಣ, ರಾಜಕೀಯ, ವಿಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಬೆಳೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಮನುವಾದಿ ಸಿದ್ಧಾಂತವನ್ನು ಯಾವ ರೀತಿ ಪ್ರತಿಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಮೋಟಮ್ಮ ಹೇಳಿದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಈ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಮಹಿಳೆಯರು ನಾಗರಾಜ್ ನೀಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಹಿಳೆಯರಿಗೆ ಗೌರವ ಕೊಡದ ಪುರುಷನಿಗೆ ಮಹಿಳೆಯರು ಮತ ಹಾಕಬಾರದು ಎಂದು ಮನವಿ ಮಾಡಿದರು. ಕೊಟ್ಟ ಕುದುರೆಯನ್ನು ಏರದವನು ವೀರನು ಅಲ್ಲ, ಧೀರನು ಅಲ್ಲ ಎನ್ನುವ ರೀತಿಯಲ್ಲಿ, ಜನರ ಆಶೀರ್ವಾದ ಪಡೆದು ಶಾಸಕರಾಗಿದ್ದವರು ಅಧಿಕಾರದ ಆಸೆಗಾಗಿ ಜನಾದೇಶವನ್ನು ಧಿಕ್ಕರಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಜನರ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿರುವ ಇವರಿಗೆ ಜನ ತಕ್ಕ ಶಾಸ್ತಿ ಮಾಡಬೇಕು ಎಂದು ಎಂದು ಅವರು ಹೇಳಿದರು.
ಬಿಜೆಪಿಯಲ್ಲಿಯೂ ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್ ಅವರಂತಹ ಮಹಿಳಾ ನಾಯಕಿಯರು ಕೆಲಸ ಮಾಡಿದ್ದಾರೆ. ನಾಗರಾಜ್ ನೀಡಿರುವ ಹೇಳಿಕೆ ಕೇವಲ ತಮ್ಮ ಪ್ರತಿಸ್ಪರ್ಧಿಗಷ್ಟೇ ಅಲ್ಲ, ಇಡೀ ಮಹಿಳಾ ಕುಲಕ್ಕೆ ಅನ್ವಯಿಸುತ್ತದೆ. ಈ ವಿಚಾರವನ್ನು ಬಿಜೆಪಿಯ ನಾಯಕರು ಗಮನಿಸಬೇಕು ಎಂದು ರಾಣಿ ಸತೀಶ್ ಹೇಳಿದರು.
ಮಹಿಳೆಯರಿಗೆ ಅಗೌರವ ತರುವ ರೀತಿಯಲ್ಲಿ ನೀಡಿರುವ ಹೇಳಿಕೆಗಳನ್ನು ಚುನಾವಣಾಧಿಕಾರಿಗಳು ಗಮನಿಸಿ, ನಾಗರಾಜ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ವಜಾಗೊಳಿಸಬೇಕು ಎಂದು ರಾಣಿ ಸತೀಶ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.