ಗೆಲುವಿನ ಮೂಲಕವೇ ರಾಜಕೀಯ ವಿರೋಧಿಗಳಿಗೆ ಉತ್ತರ: ಅನರ್ಹ ಶಾಸಕ ಸೋಮಶೇಖರ್

Update: 2019-11-23 15:47 GMT

ಬೆಂಗಳೂರು, ನ. 23: ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ನನ್ನ ರಾಜಕೀಯ ವಿರೋಧಿಗಳಿಗೆ ನಾನು ಉತ್ತರ ನೀಡುತ್ತೇನೆಯೇ ಹೊರತು ಅವರ ಯಾವುದೇ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಚೋಳನಾಯಕನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾರೇನಹಳ್ಳಿಯ ಪ್ರಸನ್ನ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಟೀಕೆಗೆ ನನ್ನ ಗೆಲುವಿನ ಮೂಲಕ ಉತ್ತರ ನೀಡುವೆ ಎಂದರು.

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಾವುದೇ ಸ್ವಾರ್ಥ ಸಾಧನೆಗಾಗಿ ಅಲ್ಲ. ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ, ಕೆಲವರು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅವುಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಗೆದ್ದರೆ ಸಚಿವ: ಸೋಮಶೇಖರ್ ಅವರು ಉಪಚುನಾವಣೆಯಲ್ಲಿ ಗೆದ್ದರೆ ನೂರಕ್ಕೆ ನೂರು ಅವರು ಮಂತ್ರಿಯಾಗಲಿದ್ದು, ಕ್ಷೇತ್ರದಲ್ಲಿ ಬಾಕಿ ಇರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಿದ್ದಾರೆ. ಮತದಾರರು ಇಂತಹ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ಕೋರಿದರು.

ಯಶವಂತಪುರ ಕ್ಷೇತ್ರದ ಅಭಿವೃದ್ಧಿಗೆ ತನ್ನದೆ ಆದ ಕನಸುಗಳನ್ನು ಇಟ್ಟುಕೊಂಡಿರುವ ಸೋಮಶೇಖರ್ ಅವರಿಗೆ ಹಿಂದಿನ ಮೈತ್ರಿ ಸರಕಾರದಲ್ಲಿ ಸಮರ್ಪಕ ಅನುದಾನ ಸಿಕ್ಕಿಲ್ಲ. ಬಿಡಿಎ ಅಧ್ಯಕ್ಷರಾಗಿದ್ದ ಅವರು ಆಡಳಿತ ನಡೆಸಲಾಗದ ದುಸ್ಥಿತಿಯಿಂದ ರಾಜೀನಾಮೆ ನೀಡಿ ಹೊರಬಂದಿದ್ದಾರೆ ಎಂದರು.

ಡಿ.5ರಂದು ನಡೆಯುವ ಉಪಚುನಾವಣೆ ಮತದಾನದ ವೇಳೆ ಜನರು ಸ್ವಯಂಪ್ರೇರಿತರಾಗಿ ಮತ ಹಾಕಿ ಸೋಮಶೇಖರ್ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದ ಶೋಭಾ ಕರಂದ್ಲಾಜೆ, ಅವರು ಸಚಿವರಾದ ಕೂಡಲೇ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News