×
Ad

ಆಟದ ಮೈದಾನ ಉಳಿವಿಗಾಗಿ ಸೂಕ್ತ ಕ್ರಮ: ಎಚ್.ಡಿ.ಕುಮಾರಸ್ವಾಮಿ

Update: 2019-11-23 22:15 IST

ಬೆಂಗಳೂರು, ನ.23: ಇಲ್ಲಿನ ರಾಮಕೃಷ್ಣನಗರದ ಮಕ್ಕಳ ಆಟದ ಮೈದಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಿ.10ರ ನಂತರ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಕಳೆದ 190ಕ್ಕೂ ಹೆಚ್ಚು ದಿನದಿಂದ ಆಟದ ಮೈದಾನಕ್ಕಾಗಿ ಆಗ್ರಹಿಸಿ ಇಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಮಕ್ಕಳಿಗೆ ಆಟದ ಮೈದಾನ ಇಲ್ಲದಂತೆ ಮಾಡುವುದು ಜನದ್ರೋಹಿ ಕೆಲಸವಾಗುತ್ತದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆಟದ ಮೈದಾನ ಅಗತ್ಯವಾದುದ್ದಾಗಿದೆ ಎಂದು ತಿಳಿಸಿದರು.

ಆಟದ ಮೈದಾನಕ್ಕಾಗಿ ಕಳೆದ 190ಕ್ಕೂ ಹೆಚ್ಚು ದಿನದಿಂದ ಹೋರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದೊಂದು ನ್ಯಾಯಯುತವಾದ ಹೋರಾಟವಾಗಿದೆ. ವಿದ್ಯಾರ್ಥಿಗಳು ಕಳೆದ 190 ದಿನದಿಂದ ತಮ್ಮ ಆಟದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯವಾದುದ್ದಾಗಿದೆ ಎಂದು ಅವರು ಹೇಳಿದರು.

ನ.10ರ ನಂತರ ರಾಮಕೃಷ್ಣನಗರ ಆಟದ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿನ ನಾಗರಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ವಾಪಸ್ ಪಡೆಯಬೇಕೆಂದು ಅವರು ಮನವಿ ಮಾಡಿದರು.

ಹೋರಾಟಗಾರ ಬಹುಜನ ಲೋಕೇಶ್ ಮಾತನಾಡಿ, ಕಳೆದ 30-40ವರ್ಷಗಳಿಂದ ರಾಮಕೃಷ್ಣನಗರ ಆಟದ ಮೈದಾನ ಇತ್ತು. ಆದರೆ, ಕೆಲವು ಭ್ರಷ್ಟರ ಕಾರಣದಿಂದಾಗಿ ಈ ಮೈದಾನವನ್ನು ಮೂರು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಆಟದ ಮೈದಾನದ ಉಳಿವಿಗಾಗಿ ಕಳೆದ 190ಕ್ಕೂ ಹೆಚ್ಚು ದಿನದಿಂದ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಆಟದ ಮೈದಾನದ ಉಳಿವಿಗಾಗಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವ ಲಲಿತಾ ನಾಯಕ್, ನಟ ಚೇತನ್ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರು ಬಗೆ ಹರಿಸುತ್ತಿಲ್ಲ. ಆದರೂ ಆಟದ ಮೈದಾನ ಸಿಗದ ಹೋರಾಟ ನಿಲ್ಲುವುದಿಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News