ಭೈರತಿ ಬಸವರಾಜ್ ನಾಲಾಯಕ್ ಶಾಸಕ: ಕೆ.ಆರ್.ಪುರ ಕ್ಷೇತ್ರ 'ಕೈ' ಅಭ್ಯರ್ಥಿ ನಾರಾಯಣಸ್ವಾಮಿ

Update: 2019-11-23 17:23 GMT

ಬೆಂಗಳೂರು, ನ.23: ಭೈರತಿ ಬಸವರಾಜ್ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿ ಈ ಬಾರಿ ಅನರ್ಹರಾಗಿದ್ದು, ನ್ಯಾಯಾಲಯವೇ ಅವರಿಗೆ ನಾಲಾಯಕ್ ಶಾಸಕನೆಂದು ಕರೆದಿದೆ ಎಂದು ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಶನಿವಾರ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಮತ್ತೊಮ್ಮೆ ಇಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಭೈರತಿ ಬಸವರಾಜ್ ಓರ್ವ ಭ್ರಷ್ಟ ರಾಜಕಾರಣಿ, ಪಕ್ಷಕ್ಕೆ ದ್ರೋಹ ಮಾಡಿ ಹೋಗಿರುವವರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ನನ್ನನ್ನು ಪ್ರತಿಸ್ಪರ್ಧಿಯೇ ಅಲ್ಲ ಎಂದಿರುವ ಅವರಿಗೆ ಡಿ.9ರಂದು ಪ್ರಕಟವಾಗುವ ಚುನಾವಣಾ ಫಲಿತಾಂಶ ಉತ್ತರ ಕೊಡುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.

ಕೆ.ಆರ್.ಪುರ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸಿದೆ. ಪ್ರಮುಖವಾಗಿ ಇಲ್ಲಿನ ಸಂಚಾರ ವ್ಯವಸ್ಥೆ ಸುಧಾರಣೆ ಮಾಡಬೇಕು. ‘ಹಸಿರು ಕೆ.ಆರ್.ಪುರ-ಸ್ವಚ್ಛ ಕೆ.ಆರ್.ಪುರ’ ನಿರ್ಮಿಸುವುದು ನನ್ನ ಸಂಕಲ್ಪ. ಕೆರೆಗಳು ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.

ಸರಕಾರದ ಯೋಜನೆಗಳನ್ನು ಬಡ ಜನರಿಗೆ ತಲುಪಿಸುವಲ್ಲಿ ಈ ಅನರ್ಹ ಶಾಸಕ ವಿಫಲವಾಗಿದ್ದಾರೆ. ಕೆ.ಆರ್.ಪುರ ಒಂದು ರೀತಿಯಲ್ಲಿ ಗೂಂಡಾ ರಾಜ್ಯವಾಗಿದೆ. ಇದಕ್ಕೆ ಇತಿಶ್ರೀ ಹಾಡಬೇಕು. ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ, ನಮ್ಮ ಮಕ್ಕಳು ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಮ್ಮ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಲು ಯಾವ ನೈತಿಕತೆ ಇದೆ. ಉಪ ಮುಖ್ಯಮಂತ್ರಿಯಾಗಿದ್ದವರನ್ನು ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನಕ್ಕೆ ಇಳಿಸಿದೆ. ಮೊದಲು ತಮ್ಮ ಸಾಮರ್ಥ್ಯದ ಬಗ್ಗೆ ಅವರು ಚಿಂತನೆ ನಡೆಸಲಿ ಎಂದು ಅವರು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್, ಕೆ.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಮಂಜುನಾಥ್, ಕಾಂಗ್ರೆಸ್ ಮುಖಂಡ ಡಿ.ಕೆ.ಮೋಹನ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News