×
Ad

ಕವಿಗಳಲ್ಲದ ಕವಿಗಳ ಹಾವಳಿ ಅಧಿಕವಾಗುತ್ತಿದೆ: ಎಚ್.ಎಸ್.ವೆಂಕಟೇಶಮೂರ್ತಿ

Update: 2019-11-23 23:28 IST

ಬೆಂಗಳೂರು, ನ.23: ಕವಿಗಳಲ್ಲದ ಕವಿಗಳು, ಕವಿತೆಗಳಲ್ಲದ ಕವಿತೆಗಳನ್ನು ಓದುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ಹಾಗೂ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಡಾ.ಪು.ತಿ.ನ. ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯ ನಮನ-3 ಹಾಗೂ ಪುತಿನ ಕವಿತೆಗಳ ಕುರಿತು ಪ್ರೊ.ಎಂ.ಆರ್.ಕಮಲ ಅವರು ಬರೆದಿರುವ ‘ಕೊಳದ ಮೇಲಿನ ಗಾಳಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕವಿಗೋಷ್ಠಿಗಳಲ್ಲಿ ಗಾಂಭೀರ್ಯತೆ ಇಲ್ಲದಂತಾಗಿದೆ. ಕವಿಗೋಷ್ಠಿ ಎಂದರೆ ಅತ್ಯಂತ ಗಂಭೀರವಾದುದಾಗಿದೆ. ಕವಿತೆ ಎಂದರೆ ಗಹನವಾದ, ಶಬ್ದದ ಮೂಲಕ ಕಲಾತ್ಮಕ ಕಲಾಕೃತಿ ಸೃಷ್ಟಿಸುವುದಾಗಿದೆ. ಅನೇಕ ಕವಿಗಳು ಕವಿತೆಗಳನ್ನು ರಚಿಸಲು ಬದುಕನ್ನೇ ಧಾರೆ ಎರೆದಿದ್ದಾರೆ ಎಂದು ಅವರು ಹೇಳಿದರು.

ಹಿಂದಿನ ದಿನಗಳಲ್ಲಿ ಕವಿಗೋಷ್ಠಿ ನಡೆದರೆ ಅದಕ್ಕೆ ಒಂದಿಷ್ಟು ಶಿಸ್ತು, ಗಂಭೀರತೆ ಇರುತ್ತಿತ್ತು. ಇಂದು ಅದೆಲ್ಲವೂ ಬದಲಾಗಿದ್ದು, 50-60 ಜನರನ್ನು ಕೂರಿಸಿಕೊಂಡು ಕವಿಗೋಷ್ಠಿ ನಡೆಸುತ್ತಾರೆ. ಅಲ್ಲಿ, ಕವಿಗಳಲ್ಲದ ಕವಿಗಳು, ಕವಿತೆಗಳಲ್ಲದ ಕವಿತೆಗಳನ್ನೇ ಓದುವ ಪ್ರವೃತ್ತಿ ಕೆಲವು ಕಡೆಗಳಲ್ಲಿ ಇದೆ ಎಂದು ನುಡಿದರು.

ಕವಿತೆ ಎಂಬುದು ಅವಸರದ ಅಡುಗೆಯಲ್ಲ. ಅದರ ತಯಾರಿ ಕಷ್ಟ, ಅನುಭವಿಸುವುದೂ ಅಷ್ಟೇನು ಸುಲಭವಲ್ಲ ಎಂದ ಅವರು, ಕವಿತೆಯ ಸಾರವನ್ನು ಸುಲಭವಾಗಿ ಮುಗಿಸಲು ಸಾಧ್ಯವಾಗಲ್ಲ. ಅದನ್ನು ನಿಧಾನವಾಗಿ, ಸಮಾಧಾನದಿಂದ ಅನುಭವಿಸಬೇಕು. ಕವಿ ಕವಿತೆ ಬರೆಯುವ ಸಮಯದಲ್ಲಿ ಒಂದೊಂದು ಅಕ್ಷರ, ಒಂದೊಂದು ವಾಕ್ಯವನ್ನು ಆಸ್ವಾದಿಸಿ ಕಟ್ಟುತ್ತಾನೆ ಎಂದರು.

ಲೇಖಕಿ ಕಮಲ ಅವರು, ಪು.ತಿ.ನ ಅವರ ಕವಿತೆಗಳನ್ನು ಆಯ್ಕೆ ಮಾಡಿಕೊಂಡು, ಕವಿತೆಗಳ ಅನುಸಂಧಾನ ಹಾಗೂ ಜೀವನದ ಮೇಲೆ ಹೇಗೆ ಪ್ರಚೋದನೆ ಬೀರುತ್ತವೆ ಎಂಬುದನ್ನು ಸೂಚಿಸುವ ಲಲಿತ ಪ್ರಬಂಧವನ್ನು ರಚಿಸಿದ್ದಾರೆ. ಇದೊಂದು ಹೊಸ ರೀತಿಯ ಕಾವ್ಯ ಅಧ್ಯಯನ ಪ್ರವೇಶಕ್ಕೆ ಮುನ್ನುಡಿಯಿದ್ದಂತಿದೆ ಎಂದು ಬಣ್ಣಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ದ.ರಾ.ಬೇಂದ್ರ, ಕುವೆಂಪು ಹಾಗೂ ಪು.ತಿ.ನರಸಿಂಹಾಚಾರ್ಯರಲ್ಲಿ ಅತ್ಯಂತ ಪ್ರಿಯರೆಂದರೆ ಪು.ತಿ.ನ ಅವರು. ಛಂದಸ್ಸು ಹಾಗೂ ದ್ರಾವಿಡ ಛಂದಸ್ಸಿನ ಲಯಗಳಲ್ಲಿ ವಿಶೇಷ ಪ್ರಯೋಗ ಮಾಡಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಕಾವ್ಯ ಕೇಳುವ ಕಾಲ ಕಳೆದು ನೋಡುವ ಕಾಲ ಬಂದು ನೋಡಿದ್ದನ್ನು ಮಾತ್ರ ನಂಬುವಂತಾಯಿತು. ಕಿವಿಗೆ ಕಲ್ಪನಾ ಶಕ್ತಿ ಇತ್ತು. ಆದರೆ ಕಣ್ಣಿಗಿಲ್ಲ. ಕಿವಿಗೆ ಮಹತ್ವ ಬರುವ ರೀತಿಯಲ್ಲಿ ಟ್ರಸ್ಟ್ ಮಾಡುತ್ತಿದೆ. ಸಾಹಿತ್ಯ ಕಿವಿ ಮೂಲಕ ಕಲ್ಪನೆ ಮೂಲಕ ಮನಸ್ಸಿನ ಆಳಕ್ಕಿಳಿಯಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಚಂದೇಶೇಖರ ಕಂಬಾರ, ಜಯಂತ ಕಾಯ್ಕಿಣಿ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಎಂ.ಆರ್.ಕಮಲ, ಜ.ನಾ.ತೇಜಶ್ರೀ ತಮ್ಮ ಕವನಗಳನ್ನು ವಾಚಿಸುವ ಮೂಲಕ ಕಾವ್ಯ ನಮನ ಸಲ್ಲಿಸಿದರು.

ನಮ್ಮಳಗಿನ ಕವಿಗಳಲ್ಲಿ ಪು.ತಿ.ನ ಅತ್ಯಂತ ಅಪರೂಪದ ಮೇಧಾವಿ ಕವಿಯಾಗಿದ್ದಾರೆ. ಜೀವನದ ದೃಷ್ಟಿಕೋನ, ಜೀವನ ಶೈಲಿ ಭಿನ್ನವಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

-ಜಯಂತ ಕಾಯ್ಕಿಣಿ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News