ನ್ಯಾಯಾಲಯಗಳ ಪ್ರಕರಣಗಳು ತ್ವರಿತವಾಗಿ ಮುಗಿಯುವಂತಾಗಲಿ: ನ್ಯಾ.ಪ್ರತಿಭಾ ಎಂ.ಸಿಂಗ್
ಬೆಂಗಳೂರು, ನ.23: ನ್ಯಾಯಾಲಯದ ಪ್ರಕರಣಗಳು ನಿಗದಿತ ವೇಳೆಯಲ್ಲಿ ಮುಗಿಯುವಂತಾದರೆ ಜನತೆಗೆ ನ್ಯಾಯಾಲಯಗಳ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡುತ್ತದೆ ಎಂದು ದಿಲ್ಲಿ ಕೈಕೋರ್ಟ್‌ನ ನ್ಯಾ.ಪ್ರತಿಭಾ ಎಂ.ಸಿಂಗ್ ಅಪ್ರಾಯಿಸಿದ್ದಾರೆ.
ಶನಿವಾರ ನಗರದ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘ ವತಿಯಿಂದ ಆಯೋಜಿಸಿದ್ದ ಬೆಂಗಳೂರು ಮಹಿಳಾ ವಕೀಲರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಕ್ಕಾಗಿ ಬಂದ ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ನೀಡುವಂತಾಗಬೇಕು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ ಎಂದು ತಿಳಿಸಿದರು.
ಜಗತ್ತಿಗೆ ನ್ಯಾಯ ಕೊಡುವ ಶಾಖೆ ನ್ಯಾಯಾಲಯ. ಹಿರಿಯ ನ್ಯಾಯವಾದಿಗಳ, ನ್ಯಾಯಮೂರ್ತಿಗಳು ತೋರಿಸಿದ ದಾರಿಯಲ್ಲಿ ನಾವು ನಡೆಯಬೇಕು. ಹಾಗೂ ಯುವ ವಕೀಲರು ಗ್ರಹಿಸುವ ಶಕ್ತಿಯನ್ನು ಹೆಚ್ಚು ರೂಢಿಸಿಕೊಳ್ಳಬೇಕು. ಜತೆಗೆ, ಕಕ್ಷಿದಾರರನ್ನು ಗೌರವಿಸಿದರೆ ನಮ್ಮನ್ನು ನಾವು ಗೌರವಿಸಿದಂತೆಯೇ ಎಂದು ಅವರು ತಿಳಿಸಿದರು.
ನ್ಯಾಯಕ್ಕಾಗಿ ಹಂಬಲಿಸಿ ಬರುವ ಸಂತ್ರಸ್ತರನ್ನು ವಕೀಲರು ನಗು ಮುಖದಲ್ಲಿ ಮಾತನಾಡಿಸಬೇಕು. ಇದರಿಂದ ಸಂತ್ರಸ್ತರಿಗೆ ಆತ್ಮವಿಶ್ವಾಸ ಮೂಡುತ್ತದೆ. ನ್ಯಾಯಾಲಯ ಇರುವುದೇ ಕಕ್ಷಿದಾರರಿಗಾಗಿ ಎಂಬುದನ್ನು ನಾನು ಮನಗಾಣುವ ಮೂಲಕ ಜನತೆಯ ಸೇವೆಯಲ್ಲಿ ತೊಡಗಬೇಕೆಂದು ಅವರು ಆಶಿಸಿದರು.
ವಕೀಲ ವೃತ್ತಿಯ ತರಬೇತಿಗಾಗಿ ದೆಹಲಿಗೆ ಸಾಕಷ್ಟು ವಕೀಲರು ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ. ಅಲ್ಲಿನ ಅನುಭವವೇ ವಿಶಿಷ್ಟವಾದುದ್ದೆಂದು ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಮೊದಲ ಬಾರಿಗೆ ಖಾಸಗಿ ಸುದ್ದಿ ವಾಹಿನಿ ಪರವಾಗಿ ವಕಾಲತ್ತು ವಹಿಸಿದ್ದೇ. ಇದರಿಂದ ವಾಹಿನಿ ಪ್ರಸಾರ ಕಾಯ್ದೆಯೊಂದು ರೂಪಗೊಂಡಿತು ಎಂದು ಅವರು ಹೇಳಿದರು.
ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮಾತನಾಡಿ, ಮಹಿಳಾ ವಕೀಲರು ಸಂಘಟಿತರಾಗಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಕಾನೂನಿನ ಸೀಮಿತ ತಿಳಿವಳಿಕೆಯೊಳಗೇ ಅನೇಕ ಸರಕಾರೇತರ ಸ್ವಯಂಸೇವಾ ಸಂಸ್ಥೆಗಳು ಇಂದು ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿವೆ. ಬೀದಿಗಿಳಿದು ಹೋರಾಟ ಮಾಡಲಾಗದಿದ್ದರೂ ಮಹಿಳಾ ವಕೀಲರು ಇವರ ಬೆನ್ನಿಗೆ ನಿಂತು ಕಾನೂನು ನೆರವು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿದಂತೆ ಪ್ರಮುಖರಿದ್ದರು.