ವಿವಿಧ ಅಪರಾಧ ಪ್ರಕರಣ: 57 ಮಂದಿ ಸೆರೆ, 1.30 ಕೋಟಿ ರೂ. ಮೌಲ್ಯದ ಮಾಲು ಜಪ್ತಿ
ಬೆಂಗಳೂರು, ನ.23: ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 57 ಮಂದಿಯನ್ನು ಬಂಧಿಸಿರುವ ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು, 1.30 ಕೋಟಿ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಬೇಧಿಸಿರುವ 56 ಪ್ರಕರಣಗಳಲ್ಲಿ ಆಡುಗೋಡಿಯಲ್ಲಿ 6, ಬೇಗೂರು 15, ಎಲೆಕ್ಟ್ರಾನಿಕ್ ಸಿಟಿ 19, ಮೈಕೋ ಲೇಔಟ್ 7, ಮಡಿವಾಳದಲ್ಲಿ 9 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದರು. ಮಡಿವಾಳ ಠಾಣಾ ಪೊಲೀಸರು ವಾಹನ ಕಳವು ಆರೋಪದಡಿ ತಮಿಳುನಾಡಿನ ವೆಲ್ಲೂರು ಮೂಲದ ದಿವಾಕರ್ (20), ಮುರಳಿ (24), ಶ್ರೀರಾಮ್ (20) ಹಾಗೂ ಸತೀಶ್ (19)ನನ್ನು ಬಂಧಿಸಿ 18 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳು, 1 ಟ್ರಾಕ್ಟರ್, 1 ಟ್ರಾಲಿ, 1 ನೀರಿನ ಟ್ಯಾಂಕರ್ ಜಪ್ತಿ ಮಾಡಲಾಗಿದೆ.
ಅದೇ ರೀತಿ, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 2 ಕೆಜಿ ಚಿನ್ನ, 4 ಕೆಜಿ 600 ಗ್ರಾಂ ಬೆಳ್ಳಿ, 26 ಕೆಜಿ 500 ಗ್ರಾಂ ಗಾಂಜಾ, 44 ದ್ವಿಚಕ್ರ ವಾಹನಗಳು, 4 ಕಾರುಗಳು ಸೇರಿ 1 ಕೋಟಿ 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಂಡು ತನಿಖೆ ಮುಂದುವರೆಸಲಾಗಿದೆ.