ವಿಚಿತ್ರವೆಂದು ವಿರಮಿಸಬೇಡಿ

Update: 2019-11-23 19:29 GMT

ಕೂತಲ್ಲಿ ಕೂರಲಾರರು

ವಿಯರ್ಡ್ ಎಂದು ಇಂಗ್ಲಿಷಲ್ಲಿ ಹೇಳುವುದನ್ನು ವಿಲಕ್ಷಣ ಎಂದು ಕನ್ನಡದಲ್ಲಿ ಹೇಳಿದರೂ, ಆಡುಭಾಷೆಯಲ್ಲಿ ವಿಚಿತ್ರ ಎಂದು ಬಿಡುತ್ತೇವೆ.

ಕೆಲವು ಮಕ್ಕಳು ಮತ್ತು ದೊಡ್ಡವರೂ ಕೂಡಾ ಒಂದು ಉದ್ಯಾನವನಕ್ಕೆ ಹೋದರೆ ಅಥವಾ ಗಿಡ ಮರಗಳಿರುವ ಜಾಗಕ್ಕೆ ಹೋದರೆ, ರೆಂಬೆಯನ್ನೋ, ಕೊಂಬೆಯನ್ನೋ ಸುಮ್ಮನೆ, ವಿನಾಕಾರಣ ಮುರಿಯುತ್ತಾರೆ. ಮುರಿಯುತ್ತಲೇ ಇರುತ್ತಾರೆ. ಅದನ್ನು ಎಷ್ಟು ತಿರುಗಿಸಿ, ಮುರುಗಿಸಿ ತುಂಡು ತುಂಡು ಮಾಡಬಹುದೋ ಅಷ್ಟನ್ನೂ ಮಾಡುತ್ತಾರೆ. ಎಲೆಗಳನ್ನು ಕಿತ್ತು ಚಿಂದಿಚಿಂದಿ ಮಾಡುತ್ತಾರೆ, ಹೊಸಕುತ್ತಿರುತ್ತಾರೆ. ಹುಲ್ಲುಹಾಸಿನ ಮೇಲೆ ಕೂತರೆ ಅವರ ಕೈಗಳು ಸುಮ್ಮನಿರದೇ ಹುಲ್ಲನ್ನು ಕೀಳುತ್ತಲೇ ಇರುತ್ತಾರೆ. ಅಲ್ಲೆಲ್ಲೋ ಸುಮ್ಮನೆ ಸಾಗುತ್ತಿರುವ ಇರುವೆಯನ್ನು ಬೆರಳಿನಿಂದ ಅದುಮಿ ಸಾಯಿಸುತ್ತಾರೆ.

ಮತ್ತೆ ಕೆಲವರು ತಾವು ಕುಳಿತುಕೊಳ್ಳುವ ಡೆಸ್ಕಿನ ಮೇಲೆ ಪೆನ್ನಿನಿಂದಲೋ, ಕಾಂಪಾಸ್‌ನಿಂದಲೋ ಏನನ್ನಾದರೂ ಕೆತ್ತುತ್ತಿರುತ್ತಾರೆ. ತಮಗೇ ಗೊತ್ತಿಲ್ಲದಂತಹ ಚಿತ್ತಾರಗಳನ್ನು ವಿಚಿತ್ರವಾಗಿ ಕೆರೆಕೆರೆದು ಮೂಡಿಸುತ್ತಿರುತ್ತಾರೆ. ಕಾಗದದ ಮೇಲೆ ಒಂದೇ ಸಮನೆ ಮಗುವೊಂದು ಅಕ್ಷರಗಳ ಅಭ್ಯಾಸಕ್ಕೆಂದು ಸ್ಲೇಟಿನ ಮೇಲೆ ತಿದ್ದುವ ಹಾಗೆ ಬರೆಯುತ್ತಿರುತ್ತಾರೆ. ಪೇಪರ್ ಹರಿದು ಹೋಗಿ ಅದರ ಹಿಂದಿನ ಹಾಳೆಗಳ ಮೇಲೆ ಗುರುತು ಮೂಡುವಂತೆ ಮಾಡುತ್ತಿರುತ್ತಾರೆ. ಅವರಿಗೆ ಸುಮ್ಮನೆ ಕುಳಿತುಕೊಳ್ಳಲು ಬೋರ್ ಆಗುತ್ತಿರುವ ಕಾರಣದಿಂದ ಹೀಗೆಲ್ಲಾ ಮಾಡುವುದು ಎಂದುಕೊಳ್ಳಬೇಡಿ. ಅವರ್ಯಾರೇ ಆಗಿರಲಿ ಅವರಿಗೇನೋ ಮಾನಸಿಕ ಸಮಸ್ಯೆ ಅಥವಾ ವರ್ತನಾದೋಷವಿದೆ ಎಂದೇ ಅರ್ಥ. ಅದು ಹಠಾತ್ ಪ್ರವೃತ್ತಿಯೂ ಇರಬಹುದು.

ವಿಲಕ್ಷಣವಾಗಿ ನಡೆದುಕೊಳ್ಳುವುದಕ್ಕೇನು ಕಾರಣ?

ವಿಲಕ್ಷಣ ವರ್ತನೆಗಳನ್ನೂ ಹೊಂದಿರುವ ಹಠಾತ್ ಪ್ರವೃತ್ತಿಗೆ ಇದೇ ನಿರ್ದಿಷ್ಟ ಕಾರಣ ಎನ್ನಲಾಗದಿದ್ದರೂ ಹಲವಾರು ಕಾರಣಗಳು ಮತ್ತು ಪ್ರಭಾವಗಳು ಮೂಲಕ್ಕೆ ನೀರೆರೆಯುತ್ತವೆ. ವಂಶವಾಹಿನಿಯೂ ಸೇರಿದಂತೆ, ಮಿದುಳಿನ, ನರಗಳಂತಹ ಶಾರೀರಿಕ ಸಮಸ್ಯೆಗಳಿಂದ ಹಿಡಿದು ವಾತಾವರಣದ ಪ್ರಭಾವದವರೆಗೂ ಇವು ಸೇರುತ್ತವೆ.

ಅನುವಂಶೀಯವಾಗಿ ಕೆಲವೊಂದು ಕುಟುಂಬಗಳಲ್ಲಿ ಮಕ್ಕಳಿಗೆ ಅಥವಾ ಯುವಕರಿಗೆ ಅವರ ವಂಶಾವಳಿಯಲ್ಲಿ ಯಾರಲ್ಲೋ ಇದ್ದಿರಬಹುದಾದಂತಹ ಮೆದುಳಿನ ನ್ಯೂನತೆ ಅಥವಾ ನರದೌರ್ಬಲ್ಯಗಳು ತಲೆದೋರಬಹುದು.

ಭಾವನೆಗಳ ಉದ್ದೀಪನಕ್ಕೆ, ನೆನಪುಗಳಿಗೆ ಮತ್ತು ಆಲೋಚನೆಗಳಿಗೆ ಸಂಬಂಧಿಸಿದ ಮೆದುಳಿನ ಕೇಂದ್ರಗಳಲ್ಲಿ ಏರುಪೇರಾಗಿದ್ದರೆ ಅಥವಾ ರಚನೆಯಲ್ಲಿಯೇ ಸಮಸ್ಯೆ ಇದ್ದರೆ, ಹಠಾತ್ ಪ್ರವೃತ್ತಿಗಳು ತಲೆದೋರಬಹುದು.

ಇನ್ನು ಮನೆಯಲ್ಲಿ ಹಿರಿಯರು ಜಗಳವಾಡುತ್ತಿದ್ದರೆ, ಅನಿಯಂತ್ರಿತವಾಗಿ ಹೊಡೆದಾಡುತ್ತಿದ್ದರೆ, ದೂಷಿಸುತ್ತಿದ್ದರೆ, ನಿಂದಿಸುತ್ತಿದ್ದರೆ, ಮಕ್ಕಳು ಕ್ರೌರ್ಯ ಮತ್ತು ಸಂಘರ್ಷಗಳನ್ನು ನೋಡುತ್ತಿದ್ದರೆ ಸಹಜವಾಗಿ ಮತ್ತು ಅವನ್ನು ಅನಿಯಂತ್ರಿತವಾಗಿಯೇ ಅವರು ಗ್ರಹಿಸುತ್ತಾರೆ. ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆಗೆ ಬರುವುದರಲ್ಲಿ ಮಕ್ಕಳು ವರ್ತನಾ ದೋಷದ ಸಮಸ್ಯೆಯನ್ನು ಬಹಳ ಗಾಢವಾಗಿ ಹೊಂದಿರುವ ಸಾಧ್ಯತೆಗಳಿರುತ್ತದೆ. ಎಳವೆಯಲ್ಲಿ ಅಥವಾ ಕಿಶೋರಾವಸ್ಥೆಯಲ್ಲಿರುವವರು ತಮಗೇ ಅರಿವಿಲ್ಲದಂತೆ ಅಂತಹ ಕ್ರೌರ್ಯ ಮತ್ತು ಸಂಘರ್ಷಗಳಲ್ಲಿ ಭಾಗಿಯಾಗತೊಡಗುತ್ತಾರೆ. ಇದು ಎಂತಹ ಪರಿಣಾಮಗಳನ್ನು ಬೀರುತ್ತದೆ ಎಂದರೆ, ವಯಸ್ಕರಾದ ಮೇಲೆ ನಂಬಲಾಗದಿದ್ದರೂ ಕೆಲವು ಕೊಲೆಯಂತಹ ಕೃತ್ಯಗಳೂ ಕೂಡಾ ಉದ್ದೇಶಪೂರ್ವಕವಲ್ಲದೆಯೇ ನಡೆದುಹೋಗುತ್ತವೆ.

ಇನ್ನೂ ಕೆಲವು ವಿಷಯಗಳನ್ನು ಗಮನಿಸಲೇಬೇಕು. ಮನೆಯವರಿಗೆ ಗೊತ್ತಿಲ್ಲದಂತೆ ಮಾದಕವಸ್ತುಗಳ ವ್ಯಸನಿಗಳಾಗಿರುವ ದೊಡ್ಡ ಮಕ್ಕಳು ಅಥವಾ ಹದಿಹರೆಯದವರು ತಮಗೇ ಅರಿವಿಲ್ಲದಂತೆ ಈ ಹಠಾತ್ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಆ ಕಿಶೋರಾವಸ್ಥೆಯಲ್ಲಿ ಮಾದಕವಸ್ತುಗಳ, ಸಿಗರೇಟು ಅಥವಾ ಕುಡಿತದ ಸಾಹಸಗಳನ್ನು ಹುಡುಗಾಟಿಕೆಯ ಖುಷಿಯ ಮನೋಭಾವದಿಂದ ಮಾಡಿದರೂ ಅದೇನಾದರೂ ವ್ಯಸನಕ್ಕೀಡಾದರೆ, ಅವರು ಸಂಬಂಧಗಳ ಜೊತೆಗೆ ಗಾಢತೆಯನ್ನು ಹೊಂದದೆ ದೂರಾಗಲು ಯತ್ನಿಸುತ್ತಿರುತ್ತಾರೆ ಮತ್ತು ಹಠಾತ್ ಪ್ರವೃತ್ತಿಯು ಬಹಳ ಸಹಜವಾಗಿಯೇ ತೋರುತ್ತದೆ.

ಬಿಸಿರಕ್ತವೆಂಬ ಮಿಥ್

ಇನ್ನೂ ಕೆಲವು ಹದಿಹರೆಯದವರ ಮನಸ್ಸಿನಲ್ಲಿ ಹಠಾತ್ತಾಗಿ ವರ್ತಿಸುವುದು ತಮ್ಮ ಯುವಶಕ್ತಿಯ ಕುರುಹು ಎಂದು ಭಾವಿಸುತ್ತಾರೆ. ಹಾಗೆಯೇ ದೊಡ್ಡವರೂ ಕೂಡಾ ಬಿಸಿರಕ್ತದ ತರುಣರು ಎಂಬ ಧೋರಣೆಯಲ್ಲಿ ಹಾಗೆ ವರ್ತಿಸುವುದನ್ನು ಸಹಜ ಎಂದು ನಿರ್ಲಕ್ಷಿಸುತ್ತಾರೆ. ಬಿಸಿರಕ್ತ ಎಂಬ ಪರಿಕಲ್ಪನೆಯು ಒಂದು ಮಿಥ್. ಎಲ್ಲರ ರಕ್ತವೂ ಬೆಚ್ಚಗೇ ಇರುವುದು. ಹಾಗೆಯೇ ಹದಿಹರೆಯದವರಲ್ಲಿ ಅಥವಾ ಯುವಕರಲ್ಲಿ ನಾವು ಏನನ್ನು ಬಿಸಿರಕ್ತದ ಆವೇಶ ಅಥವಾ ಆವೇಗ ಎಂದು ಕಾಣುತ್ತೇವೋ ಅದೊಂದು ರೂಪಕವೆಂದು ಭಾವಿಸಬಹುದು. ಆದರೆ ಅದೊಂದು ವರ್ತನಾ ಸಮಸ್ಯೆಯ ಮತ್ತೊಂದು ಮುಖ. ಇನ್ನು ತಿಳುವಳಿಕೆಯ ಭಾಗವಾಗಿ ಪ್ರತಿಕ್ರಿಯೆಯಾಗುವಾಗ ಇನ್ನೂ ಪಕ್ವವಾಗಿಲ್ಲದ ನಡವಳಿಕೆ ಎನ್ನಬಹುದು. ಯಾವುದೇ ವ್ಯಕ್ತಿಯು ತಿಳುವಳಿಕೆಗಳ ಮೂಲಕ ತನ್ನ ಮನೋಭಾವವನ್ನು ರೂಪಿಸಿಕೊಳ್ಳುತ್ತಾ ಹೋಗುವನೋ ಅವನ ನಡವಳಿಕೆ ಆದಷ್ಟೂ ಬಹಳ ಸಂಯಮದಿಂದಲೂ, ನಿಯಂತ್ರಣದಲ್ಲಿಯೂ, ಪ್ರಬುದ್ಧವಾಗಿಯೂ ಇರುತ್ತದೆ.

ಅದನ್ನುಮನಸ್ಸಿನಲ್ಲಿಟ್ಟುಕೊಂಡೇ ಮಕ್ಕಳಿಗೆ ವರ್ತನಾ ಶಿಕ್ಷಣವನ್ನು ಕಡ್ಡಾಯವಾಗಿ ಮತ್ತು ಅನೌಪಚಾರಿಕವಾಗಿ ಕೊಡಲೇಬೇಕು. ವರ್ತನೆಗಳ ಪ್ರವರ್ತನೆಯು ನಿಜಕ್ಕೂ ತರಬೇತಿಗಳಿಂದ ಎಷ್ಟೋ ಹದಗೊಳ್ಳುತ್ತದೆ.

ಕೆಲವರು ನಾವು ಗಂಡಸರು ಅಥವಾ ಗಂಡು ಮಕ್ಕಳು, ನಾವು ಇರಬೇಕಾಗಿರುವುದೇ ಹೀಗೆ ಎನ್ನುವಂತಹ ಪರಿಕಲ್ಪನೆಯನ್ನು ಗಟ್ಟಿಗೊಳಿಸಿಕೊಂಡಿರುವುದೇ ಅಲ್ಲದೇ ಅದರದ್ದೇ ಮನವರಿಕೆಯಾಗಿರುತ್ತದೆ. ಹಾಗೆಯೇ ವರ್ತಿಸುತ್ತಿರುತ್ತಾರೆ.

ಯಾವುದಾದರೂ ಗಂಡು ಮಗುವು ಯಾರೊಂದಿಗೋ ಜಗಳವಾಡಿ ಅತ್ತುಕೊಂಡು ಬಂದಾಗ ಅವನ ಮನೆಯ ಗಂಡಸರು ಅಥವಾ ಹಿರಿಯರು, ಯಾಕೋ ಒದೆ ತಿಂದುಕೊಂಡು ಬಂದೆ? ನೀನು ಗಂಡು ಹುಡುಗ ಅಲ್ಲವೇನೋ? ವಾಪಸ್ಸು ಎರಡು ಕೊಟ್ಟು ಬರಬೇಕಿತ್ತು. ನೀನೂ ಹೊಡಿಬೇಕಿತ್ತು ಎಂದು ಹೇಳುವುದನ್ನು ತುಂಬಾ ಸಾಮಾನ್ಯವಾಗಿ ಕೇಳುತ್ತೇವೆ. ಯಾಕೋ ಹೆಂಗಸಿನಂತೆ ಅಳ್ತೀಯಾ? ಗಂಡು ಮಕ್ಕಳು ಸ್ಟ್ರಾಂಗಾಗಿ ಇರಬೇಕು; ಈ ರೀತಿಯ ಮಾತುಗಳು ಮತ್ತು ವಿಚಾರಗಳ ಬಿತ್ತುವಿಕೆಗಳೂ ಹಠಾತ್ ಪ್ರವೃತ್ತಿಯನ್ನು ಪ್ರಚೋದಿಸುತ್ತವೆ ಮತ್ತು ಗಟ್ಟಿಗೊಳಿಸುತ್ತವೆ.

ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ನಾಯಿಮರಿಗೆ, ಚಿಟ್ಟೆಗೆ, ಮಿಡಿತೆಗೆ, ಓತಿಕ್ಯಾತಗಳಿಗೆ ಹಿಂಸಿಸುವುದು ಅಥವಾ ಅವುಗಳಿಗೆ ತೊಂದರೆ ನೀಡಿ ನರಳುವಾಗ ನಗುವುದು, ಅದನ್ನು ಹಾಸ್ಯವಾಗಿ ನೋಡುವಂತಹ ಅಭ್ಯಾಸಗಳೂ ಮಕ್ಕಳನ್ನು ಮುಂದೆ ಸ್ಯಾಡಿಸ್ಟ್‌ಗಳನ್ನಾಗಿ ಮಾಡುವುದಲ್ಲದೇ ಹಠಾತ್ ಪ್ರವೃತ್ತಿಯವರನ್ನಾಗಿ ರೂಪಿಸುತ್ತದೆ.

ಕುಟುಂಬದಲ್ಲಿನ ಮನೋಭಾವಗಳ ತೊಳಲಾಟಗಳ, ವಿಕ್ಷಿಪ್ತ ಅಥವಾ ವಿಲಕ್ಷಣ ಮನೋಭಾವಗಳ, ಸಂಘರ್ಷಗಳ ಚರಿತ್ರೆಯು ಕೂಡಾ ಮಕ್ಕಳಲ್ಲಿ ಹಠಾತ್ ಪ್ರವೃತ್ತಿಗೆ ಮತ್ತು ಇತರ ಬಗೆಯ ಮನೋರೋಗಗಳಿಗೂ ಕಾರಣವಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಯಾವುದೇ ರೀತಿಯ ವಿಚಿತ್ರ ಅಥವಾ ವಿಕ್ಷಿಪ್ತ ನಡವಳಿಕೆಗಳು ಕಂಡುಬಂದರೆ ಕೂಡಲೇ ಗಮನ ಹರಿಸಿ, ಅದು ಯಾವ ಪ್ರಮಾಣದಲ್ಲಿದೆ ಮತ್ತು ಅದನ್ನು ಹೇಗೆ ಸರಿಪಡಿಸಬಹುದೆಂಬ ಆಲೋಚನೆ ಮಾಡಬೇಕು.

ವಿಯರ್ಡ್ ಅಥವಾ ವಿಲಕ್ಷಣ ಅಥವಾ ವಿಚಿತ್ರ ಎಂದೋ ಆ ಹೊತ್ತಿಗೆ ದೂರಿ ಸುಮ್ಮನಾಗಲೇಬಾರದು. ವಿಯರ್ಡ್ ವೈಲೆಂಟಾದರೆ ಅಥವಾ ವಿಚಿತ್ರವೆನ್ನುವುದು ಕ್ರೌರ್ಯಕ್ಕೆ ಅಥವಾ ಹಿಂಸಾತ್ಮಕ ರೂಪಕ್ಕೆ ತಿರುಗಿದರೆ, ಆ ವ್ಯಕ್ತಿಗೆ ಮಾತ್ರ ಸಮಸ್ಯೆಯಲ್ಲ, ಅವರ ಜೊತೆಯಲ್ಲಿರುವವರಿಗೂ ಕೂಡಾ ಹಿಂಸೆಯೇ ಆಗುತ್ತದೆ. ಆಗ ಬಹುಶಃ ಸರಿಪಡಿಸಲಾಗದೇ ಹೋಗಬಹುದು. ಆದ್ದರಿಂದ ಯಾವುದೇ ಮಗುವು ಸ್ವಲ್ಪ ವಿಯರ್ಡ್ ಅಥವಾ ವಿಚಿತ್ರ ಎನಿಸಿದರೆ, ಎಷ್ಟರ ಮಟ್ಟಿಗೆ ಅದು ಭಿನ್ನವಾದ ವರ್ತನೆಗಳನ್ನು ತೋರುತ್ತಿದೆ ಮತ್ತು ಆಲೋಚನೆಗಳನ್ನು ಮಾಡುತ್ತಿದೆ ಎಂಬುದನ್ನು ಗಮನಿಸಲೇಬೇಕು. ಅಗತ್ಯವಿದ್ದರೆ ಮನಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News