×
Ad

ಭಾಷೆ ಎಂಬುದು ಬರೀ ಭಾಷೆಯಲ್ಲ, ಅದೊಂದು ಸಂಸ್ಕೃತಿ: ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತ ಕುಮಾರ್

Update: 2019-11-24 22:55 IST

ಬೆಂಗಳೂರು, ನ.24: ಭಾಷೆ ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮೆಲ್ಲರ ಏಳಿಗೆಯ ಹಿಂದೆ ಭಾಷೆಯ ಕೊಡುಗೆ ಇದೆ. ಭಾಷೆ ಎಂಬುದು ಬರೀ ಭಾಷೆಯಲ್ಲ, ಅದೊಂದು ಸಂಸ್ಕೃತಿ. ಒಂದು ಭಾಷೆ ನಾಶವಾದರೆ ಸಂಸ್ಕೃತಿಯೇ ಹಾಳಾಗುತ್ತದೆ ಎಂದು ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ ವಸಂತಕುಮಾರ್ ಹೇಳಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ನಡೆದ ಶಂಪಾ ಪ್ರತಿಷ್ಠಾನದ 2ನೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಇವತ್ತು ಆತಂಕದ ಸ್ಥಿತಿಯಲ್ಲಿರುವುದು ನಿಜ. ಆದರೆ, ಯಾವುದೇ ಪ್ರಭಾವಕ್ಕೊಳಗಾದರೂ ಕನ್ನಡ ತನ್ನತನ ಉಳಿಸಿಕೊಂಡಿದೆ. ಜಾಗತಿಕರಣ, ಖಾಸಗಿಕರಣದ ಭೂತಗಳು ದೇಸೀ ಭಾಷೆಗಳನ್ನು ನುಂಗುತ್ತಿರುವ ಕಾಲದಲ್ಲಿ ಕನ್ನಡವನ್ನು ಕಾಪಾಡಿಕೊಳ್ಳಬೇಕಿದೆ. ಕನ್ನಡವನ್ನು ಜನಮನಕ್ಕೆ ತೆಗೆದುಕೊಂಡು ಹೋಗುವಲ್ಲಿ ಶರಣರು ಕ್ರಾಂತಿ ಮಾಡಿದರು. ಕನ್ನಡವನ್ನು ಪುನರುಜ್ಜಿವನಗೊಳಿಸುವ ಕೆಲಸವನ್ನು ಕವಿಗಳು ಮಾಡಿದ್ದಾರೆ ಎಂದರು.

ಜಾಗತಿಕರಣದಿಂದ ನಮ್ಮ ನೆನಪುಗಳು, ಆದರ್ಶಗಳು, ಕನಸುಗಳು ನಾಶವಾಗುತ್ತಿವೆ. ಹಣ ಮಾಡುವ ಬರದಲ್ಲಿ ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ಮನುಷ್ಯತ್ವವನ್ನು ಮರೆತು ಬದುಕು ನಡೆಸುತ್ತಿದ್ದೇವೆ. ಈ ರೀತಿಯ ಜೀವನ ಶೈಲಿಯಿಂದ ನಾವೆಲ್ಲ ಹೊರಗೆ ಬರಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು.

ಅಸ್ಪಶ್ಯತೆ ಸಮಾಜಕ್ಕೆ ಕಂಟಕವಾದುದು. ಅದನ್ನು ನಿರ್ಮೂಲನೆ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದ ಅವರು, ಪರ ಭಾಷಿಕರಿಗೆ ಕನ್ನಡ ಭಾಷೆ ಕಲಿಸಬೇಕು. ಅವರಿಗೆ ಕನ್ನಡ ಬರುವುದಿಲ್ಲ ಎಂದು ಬೈದುಕೊಂಡು ಓಡಾಡುವುದು ತಪ್ಪು. ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಜವಾಬ್ದಾರಿ ಕನ್ನಡಿಗರದ್ದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ. ಸಿದ್ದಲಿಂಗಯ್ಯ, ಶಂಪಾ ಪ್ರತಿಷ್ಠಾನದ ಸಂಸ್ಥಾಪಕಿ ಡಾ. ಪ್ರಮೀಳಾ ಮಾಧವ್, ಲೇಖಕ ಪ್ರೊ. ಜಿ.ಅಬ್ದುಲ್ ಬಷೀರ್, ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಡಾ.ಎಸ್.ಜಿ ಸುಶೀಲಮ್ಮ, ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಂಪನ್ನಕುಮಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News