ಮಾನವನ ದೈವ ನಿರ್ಣಯ ಮಾಡುವವನು ವೈದ್ಯ: ಡಾ.ಚಂದ್ರಶೇಖರ ಕಂಬಾರ

Update: 2019-11-24 17:45 GMT

ಬೆಂಗಳೂರು, ನ.24: ವೈದ್ಯರ ಬಗ್ಗೆ ಭಕ್ತಿ ಮತ್ತು ಗೌರವ ಇರಬೇಕು. ಸಾವಿನ ಜತೆಗೆ ಮಾತನಾಡುವುದು ವೈದ್ಯರಾಗಿದ್ದು, ಮಾನವನ ದೈವ ನಿರ್ಣಯ ಮಾಡುವವನು ವೈದ್ಯ ಎಂದು ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ರವಿವಾರ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಯುವೇದ ಶಾಸ್ತ್ರ, ಶಾಸ್ತ್ರೋತ್ತವಾಗಿ ಕಲಿಯುತ್ತಿಲ್ಲ. ಇದಕ್ಕೆ ಬ್ರಿಟಿಷರೇ ಕಾರಣ. ಮೆಕಾಲೆಯಿಂದಾಗಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭವಾಯಿತು. ಇದರಿಂದ ಸ್ವಂತ ಆಲೋಚನೆ ಮಾಡುವುದೇ ಕಲಿಯಲಿಲ್ಲ. ಮಾತೃ ಭಾಷೆಯಿಂದಲೇ ಸ್ವಂತ ಆಲೋಚನೆ ಬರಲಿದೆ ಎಂದರು.

ವೈದ್ಯರು ಯಾವ ಭಾಷೆ ಓದಿದರೂ, ರೋಗಿಗಳಿಗೆ ಅರ್ಥೈಸಲು ಕನ್ನಡ ಅಗತ್ಯ. ಇತ್ತೀಚಿಗೆ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ. ಏಕೆಂದರೆ ವಿಷಯ ಅರ್ಥ ಮಾಡಿಕೊಳ್ಳಲು ಕನ್ನಡ ಬಳಸುತ್ತಾರೆ. ಪುಸ್ತಕವನ್ನು ಬೇರೆ ಭಾಷೆಯಲ್ಲಿ ಓದುತ್ತಾರೆ. ಅದಕ್ಕಾಗಿ ಹೆಚ್ಚಿನ ಅಂಕ ಪಡೆಯುತ್ತಾರೆ. ಸಿ.ಎನ್. ರಾವ್ ಅವರು ಕನ್ನಡದಲ್ಲೇ ಕಲಿತಿದ್ದಕ್ಕೆ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಅದಕ್ಕಾಗಿಯೇ ಮಾತೃಭಾಷೆ ಕಲಿತವರು ಎಲ್ಲಿ ಬೇಕಾದರೂ ಬದುಕುತ್ತಾರೆ ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ಸೂಕ್ತ ಸಂದರ್ಭದಲ್ಲಿ ವೈದ್ಯರು ಗುಣಮಟ್ಟ ಚಿಕಿತ್ಸೆ ನೀಡಿದರೂ, ರೋಗಿಗಳು ಮೃತಪಟ್ಟರೆ ಕುಟುಂಬದವರು ಮತ್ತು ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ನಿಲ್ಲಬೇಕು ಎಂದು ಹೇಳಿದರು.

ರೋಗಿಯ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಯ ಪರವಾಗಿ ದೇವರನ್ನು ಪೂಜಿಸುತ್ತೇವೆ. ವೈದ್ಯರೇ ರೋಗಿಗಳಾಗುವ ವ್ಯವಸ್ಥೆ ರೂಪಗೊಂಡಿದೆ. ಒತ್ತಡಗಳ ನಡುವೆಯೇ ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೃತ್ತಿ ಧರ್ಮವನ್ನು ಗೌರವಿಸಿ ವೈದ್ಯರು ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಹಲ್ಲೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಯಾವ ಭಾಷೆಯಲ್ಲಿ ಅಧ್ಯಯನ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಹೇಗೆ ಕಲಿಯುತ್ತೇವೆ ಎಂಬುದೇ ಮುಖ್ಯ. ಭಾರತೀಯರಲ್ಲಿ ಒಂದು ವ್ಯಾಮೋಹ ಇದೆ. ಇಂಗ್ಲಿಷ್ ಕಲಿತರೆ ಬುದ್ಧಿವಂತರು ಎಂಬ ತಪ್ಪು ಕಲ್ಪನೆಯಿದೆ. ಇದರಿಂದ ಹೊರಬರಬೇಕು. ಇಂಗ್ಲಿಷ್‌ನಲ್ಲಿ ಓದಲಿ. ಆದರೆ, ಕನ್ನಡ ಮರೆಯಬಾರದು ಎಂದು ತಿಳಿಸಿದರು.

ವಿಶ್ವದಲ್ಲಿ 84 ಲಕ್ಷ ಜೀವರಾಶಿ ಇದ್ದು, ಬುದ್ದಿವಂತಿಕೆ ಮತ್ತು ನೆನಪಿನ ಶಕ್ತಿ ಇರುವ ಪ್ರಾಣಿ ಮನುಷ್ಯ. ಮನುಷ್ಯನಿಗೆ ನಿದ್ರೆ ಬಹಳ ಪ್ರಮುಖವಾಗಿದ್ದು, ಯಾರು ಚೆನ್ನಾಗಿ ನಿದ್ರೆ ಮಾಡುತ್ತಾರೆ ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ನಿದ್ರೆ ಚೆನ್ನಾಗಿ ಆಗದಿದ್ದರೆ ತಲೆನೋವು ಸೇರಿದಂತೆ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದರು.

ಕೌಶಲ್ಯತೆ ಇದ್ದರೆ ಸಲದು ಕರುಣೆ ಇರಬೇಕು. ಮನುಷ್ಯ ಪ್ರತಿ ಮನೆಯಲ್ಲಿ ಹುಟ್ಟುತ್ತಾರೆ. ಆದರೆ, ಮನುಷ್ಯತ್ವ ಇರಬೇಕು. ವೈದ್ಯರಿಗೆ ತಾಯಿಯ ಹೃದಯ ಇರಬೇಕು. ಏಕೆಂದರೆ ರೋಗಿ ಜತೆ ಮಾತೃಭಾಷೆಯಲ್ಲಿ ಮಾತನಾಡಬೇಕು. ತಾಯಿ ಹೃದಯ ಸಮುದಾಯವನ್ನೇ ಬಿಂಬಿಸುತ್ತದೆ ಎಂದರು.

ಈ ವೇಳೆ ಲೇಖಕ ಡಾ. ಎಚ್.ಎಸ್.ಸುರೇಶ್ ಅವರು ರಚಿಸಿದ ‘ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?’, ‘ನಿದ್ರೆ ಆರೋಗ್ಯಕ್ಕೆ ಸಂಜೀವಿನಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ಜಯದೇವ ಹೃದ್ರೋಗ ಸಂಸ್ಥೆ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅರ್ಬುಧ ರೋಗ ಶಸ್ತ್ರ ಚಿಕಿತ್ಸಕ ಡಾ. ಸಿದ್ಧಪ್ಪ, ಮೈಸೂರು ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ. ಮಂಜುನಾಥ್ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಡಾ.ಚಿಕ್ಕಮೊಗ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ರವಿಕುಮಾರ್ ಬಿ.ಸಿ., ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಕೆ.ಬಿ. ಕೆಂಪೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News