ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕಿಳಿದ ರೋಷನ್‌ ಬೇಗ್

Update: 2019-11-25 16:30 GMT

ಬೆಂಗಳೂರು, ನ. 25: ಉಪಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ‘ಕ್ಷೇತ್ರದಿಂದ ದೂರ’ ಉಳಿದಿದ್ದ ಅನರ್ಹ ಶಾಸಕ ಆರ್.ರೋಷನ್ ಬೇಗ್, ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರವಣ ಅವರ ಪರ ಕೊನೆಗೂ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.

ಸೋಮವಾರ ಬಿಜೆಪಿ ವಾರ್ಡ್ ಕಚೇರಿಗೆ ಭೇಟಿ ಮಾಡಿ ಅಭ್ಯರ್ಥಿ ಶರವಣ ಪರ ಮತಯಾಚನೆ ಮಾಡಿದ ರೋಷನ್ ಬೇಗ್, ಶಿವಾಜಿನಗರ ಕ್ಷೇತ್ರ ಛೋಟಾ ಹಿಂದೂಸ್ಥಾನ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು, ಜೈನರು, ಕ್ರೈಸ್ತರು ಸೇರಿ ಎಲ್ಲರೂ ಒಟ್ಟಾಗಿರಬೇಕು ಎಂದರು.

ಈ ದೇಶ ಮೋದಿ ನೇತೃತ್ವದಲ್ಲಿ ಮುನ್ನಡೆಯಬೇಕು. ಮುಸ್ಲಿಮರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಮುಸ್ಲಿಮರು ಬೇರೆ ಎನ್ನುವ ಸಂದೇಶ ಹೋಗಬಾರದು. ಬಿಜೆಪಿ ಜೊತೆ ನಾವೂ ಇರಬೇಕು. ಮುಸ್ಲಿಮರೂ ದೇಶದ ಅಭಿವೃದ್ಧಿ ಬಯಸುತ್ತಾರೆನ್ನುವುದನ್ನು ತೋರಿಸಬೇಕೆಂದು ರೋಷನ್ ಬೇಗ್ ಪ್ರತಿಪಾದಿಸಿದರು.

ಮುಸ್ಲಿಮರ ಓಲೈಕೆ, ವೋಟ್ ಬ್ಯಾಂಕ್ ರಾಜಕಾರಣದ ಕಾಲ ಮುಗಿದಿದೆ. ಅಲ್ಪಸಂಖ್ಯಾತರನ್ನು ತೋರಿಸಿ ಮೂರ್ಖರನ್ನಾಗಿ ಮಾಡುವ ಕಾಲ ಇನ್ನು ಇಲ್ಲ. ನಾವೂ ದೇಶದ ಅಭಿವೃದ್ಧಿಯನ್ನು ಬಯಸುತ್ತೇವೆ. ದೇಶದ ಅಭಿವೃದ್ದಿಗಾಗಿ ನಾವು ಮೋದಿ ಜೊತೆಗಿದ್ದೇವೆ ಎಂದು ರೋಷನ್‌ ಬೇಗ್ ಘೋಷಿಸಿದರು.

ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯ ಗುಣಶೇಖರ್ ಮಾತನಾಡಿ, ನಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಿದ್ದಾರೆ. ಹೀಗಾಗಿ ನಾನು ಹೇಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿ. ನಮ್ಮ ಮುಖಂಡ ಬೇಗ್ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News