ಶಿವಾಜಿನಗರಕ್ಕೆ ರಿಝ್ವನ್ ಅರ್ಶದ್ ಕೊಡುಗೆ ಏನು?: ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಹನ್ನಾನ್ ಪ್ರಶ್ನೆ

Update: 2019-11-25 17:31 GMT

ಬೆಂಗಳೂರು, ನ.25: ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಿಝ್ವನ್ ಅರ್ಶದ್ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಹನ್ನಾನ್ ಸವಾಲು ಹಾಕಿದ್ದಾರೆ.

ಸೋಮವಾರ ಶಿವಾಜಿನಗರದಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರಕ್ಕೆ ನಮ್ಮ ಕೊಡುಗೆ ಏನು ಪ್ರಶ್ನಿಸುವವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಕೊಡುಗೆ ಏನು ಎಂಬುದನ್ನು ಮೊದಲು ತಿಳಿಸಲಿ ಎಂದರು.

ಲೋಕಸಭಾ ಚುನಾವಣೆಯಲ್ಲಿ 5.40 ಲಕ್ಷ ಮತಗಳನ್ನು ಪಡೆದಿರುವ ಹಾಗೂ ಹಾಲಿ ವಿಧಾನಪರಿಷತ್ತಿನ ಸದಸ್ಯರಾಗಿರುವ ಕಾಂಗ್ರೆಸ್‌ನ ಅಭ್ಯರ್ಥಿ ಶಿವಾಜಿನಗರಕ್ಕೆ ಏನು ಮಾಡಿದ್ದಾರೆ. ಅವರ ಬಳಿ ಯಾವುದಾದರೂ ಸಾಧನೆಗಳ ವಿವರ ಇದ್ದರೆ ಸಾರ್ವಜನಿಕವಾಗಿ ಮುಂದಿಡಲಿ, ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಅವರು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಬಿ ಫಾರಂ ಸಿಗುವವರೆಗೆ ಮೌನವಾಗಿದ್ದು, ಆನಂತರ ಹೊರಗೆ ಬರುತ್ತಾರೆ. ಬಿ ಫಾರಂ ಸಿಗದಿದ್ದರೆ ಗುಂಪುಗಾರಿಕೆ ಚಟುವಟಿಕೆಗಳಿಗೆ ಬಲಿಯಾಗುತ್ತಾರೆ. ಇಂತಹ ರಾಜಕಾರಣ ಈ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಅಬ್ದುಲ್ ಹನ್ನಾನ್ ಆರೋಪಿಸಿದರು.

ಎಸ್‌ಡಿಪಿಐ ಮೌಲ್ಯಾಧಾರಿತ ರಾಜಕಾರಣ ಮಾಡಲು ಬಂದಿದೆ. ಮತಗಳನ್ನು ಹಣ ಕೊಟ್ಟು ಖರೀದಿ ಮಾಡುವ ಪ್ರವೃತ್ತಿ ನಮ್ಮ ಪಕ್ಷದಲ್ಲಿಲ್ಲ. ನಾವು ಜನರಲ್ಲಿ ಜಾಗೃತಿ ಮೂಡಿಸಿ, ಸಂಘಟಿತರನ್ನಾಗಿಸಿ, ಸೈದ್ಧಾಂತಿಕ ಹಾಗೂ ವೌಲ್ಯಗಳ ಆಧಾರದ ಮೇಲೆ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಹೊಂದಿರುವುದಿಲ್ಲವೋ, ಅವರು ಮಾತ್ರ ಮತಗಳನ್ನು ಹಣ ಕೊಟ್ಟು ಖರೀದಿ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ನಾವು ಜನರ ಬಳಿ ಮತ ಕೇಳಲು ಹೋದಾಗ, ಜನ ನಮ್ಮ ಬಳಿ ಹಣ ಕೇಳುವುದಿಲ್ಲ, ಅವರ ದಿನನಿತ್ಯದ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.

ನಾವು ಕೇವಲ ಶಿವಾಜಿನಗರ ಅಷ್ಟೇ ಅಲ್ಲ, ಸರ್ವಜ್ಞನಗರ, ಪುಲಿಕೇಶಿ ನಗರ, ಚಿಕ್ಕಪೇಟೆ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಮುಸ್ಲಿಮರು, ದಲಿತರು ಹಾಗೂ ನಿರ್ಲಕ್ಷಕ್ಕೆ ಒಳಗಾಗಿರುವ ಹಿಂದುಳಿದ ವರ್ಗಗಳ ಜನ ಹೆಚ್ಚು ವಾಸಿಸುವಂತಹ ಪ್ರದೇಶಗಳಾಗಿವೆ. ನಾವು ಈ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಬ್ದುಲ್ ಹನ್ನಾನ್ ತಿಳಿಸಿದರು.

ಶಿವಾಜಿನಗರದಲ್ಲಿ ಈಗಾಗಲೇ ನಮ್ಮ ಸಮುದಾಯದ ಒಬ್ಬ ಹಿರಿಯ ವ್ಯಕ್ತಿ ಶಾಸಕರಾಗಿ ಚುನಾಯಿತರಾಗಿದ್ದರು. ಆದುದರಿಂದ, ನಾವು ಇಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ನಾವು ಮೌನ ವಹಿಸಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News