ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಸಿದ್ದರಾಮಯ್ಯ ಕಾರಣ: ಶೋಭಾ ಕರಂದ್ಲಾಜೆ ಗಂಭೀರ ಆರೋಪ
ಬೆಂಗಳೂರು, ನ.25: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ, ಪತ್ಯಾರೋಪಗಳಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಅವರದೇ ಶಾಸಕರು ಏಕೆ ಬೇಸತ್ತಿದ್ದಾರೆ? ಈ ಹಿಂದೆ, ಸಮ್ಮಿಶ್ರ ಸರಕಾರ ರಚನೆಯಾಗುವ ಮುನ್ನ ರೆಸಾರ್ಟ್‌ನಲ್ಲಿ ಇಟ್ಟಿದ್ದ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಕಾಂಗ್ರೆಸ್‌ನಲ್ಲಿ ಏಕಾಂಗಿಯಾಗಿದ್ದಾರೆ. ಏಕೋಪಾಧ್ಯಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಂತಿದ್ದಾರೆ ಅವರ ಪರಿಸ್ಥಿತಿ ಎಂದು ಅವರು ಹೇಳಿದರು.
ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾಗಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗಿನಿಂದ ಹಿಂದುಳಿದ ವರ್ಗಗಳ ಚಾಂಪಿಯನ್‌ನಂತೆ ವರ್ತಿಸುತ್ತಿದ್ದಾರೆ. ಇವರಿಂದ ಪಕ್ಷ ಸೇರಿದ ಎಚ್.ವಿಶ್ವನಾಥ್, ಎ.ಕೃಷ್ಣಪ್ಪ ಪಕ್ಷ ತೊರೆಯುವಂತಾಯಿತು ಎಂದು ಶೋಭಾ ಕರಂದ್ಲಾಜೆ ದೂರಿದರು.
ಸಚಿವ ಶ್ರೀರಾಮುಲುರನ್ನು ‘ಪೆದ್ದ’ ಎನ್ನುವ ಮೂಲಕ ನಾಯಕ ಜನಾಂಗದ ನಾಯಕನಿಗೆ ಅಪಮಾನ ಮಾಡಿದ್ದಾರೆ. ಶ್ರೀರಾಮುಲು ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಅವರು ಆರೋಪಿಸಿದರು.
ಹೈಕಮಾಂಡ್ ಮೇಲೆ ಒತ್ತಡ ತಂದು ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಈಗ ಚುನಾವಣೆ ನಡೆದರೂ ಅವರ ಪರವಾಗಿ ಶಾಸಕರು ಮತ ಹಾಕುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಶಾಸಕ ತನ್ವೀರ್ ಸೇಠ್ ಮೇಲಿನ ಕೊಲೆ ಯತ್ನ ನಡೆಯಲು ಸಿದ್ದರಾಮಯ್ಯ ಕಾರಣ. ಜೈಲಿನಲ್ಲಿದ್ದ ಕೆಎಫ್‌ಡಿ, ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸಚಿವ ಸಂಪುಟದಲ್ಲಿ ಹಿಂಪಡೆದಿದ್ದರು. ಈ ಸಂಘಟನೆಗಳನ್ನು ನಿಷೇಧಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಉಪ ಚುನಾವಣೆಯ ಬಳಿಕ ಮತ್ತೆ ಸರಕಾರ ರಚಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. 76 ಸದಸ್ಯರಿಂದ ಸರಕಾರ ರಚಿಸಲು ಸಾಧ್ಯವೇ, ಇಲ್ಲವೇ ಮತ್ತೊಮ್ಮೆ ಜೆಡಿಎಸ್ ಬೆಂಬಲ ಕೋರಿ ಸಮ್ಮಿಶ್ರ ಸರಕಾರ ರಚಿಸುತ್ತಾರೆಯೇ? ಎಂಬುದನ್ನು ಸ್ಪಷ್ಟಪಡಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗೆದ್ದ ಮಾದರಿಯಲ್ಲಿ ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಬೆಂಬಲ ನೀಡಿದ್ದಾಗ ಈ ಶಾಸಕರು ಅವರಿಗೆ ಒಳ್ಳೆಯವರಾಗಿದ್ದರು. ಈಗ ಕೆಟ್ಟವರಾಗಿದ್ದಾರೆ. ಚುನಾವಣೆಯಲ್ಲಿ ಪಕ್ಷ ರಾಜಕಾರಣ ಮಾಡಬೇಕೆ ಹೊರತು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳನ್ನಲ್ಲ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಪಟ್ಟಿಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಚುನಾವಣೆಯಲ್ಲಿ ಮತದಾರರು, ಜಾತಿ-ಧರ್ಮ ಮೀರಿ ಅಭಿವೃದ್ಧಿ ಪರ ಮತ ನೀಡಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸುವುದರಿಂದ ಮೂರುವರೆ ವರ್ಷ ರಾಜ್ಯದಲ್ಲಿ ಸ್ಥಿರ ಸರಕಾರ ಸ್ಥಾಪನೆಯಾಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರ ಹೊಂದಿರುವ ಸದಾವಕಾಶ ದೊರೆತಿದೆ ಎಂದು ಅವರು ಹೇಳಿದರು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಎಲ್ಲೂ ಸಮಸ್ಯೆಯಿಲ್ಲ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರನ್ನು ಈಗಾಗಲೇ ಪಕ್ಷದಿಂದ ವಜಾ ಮಾಡಲಾಗಿದೆ. ಶರತ್ ಬಚ್ಚೇಗೌಡ ಕಳೆದ ಚುನಾವಣೆಯಲ್ಲಿ ಸೋತರೂ, ಸಚಿವ ಸ್ಥಾನಮಾನದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಬಚ್ಚೇಗೌಡರು ಬಿಜೆಪಿ ಸೇರಿದ ನಂತರ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿ ಸಚಿವರನ್ನಾಗಿ ಮಾಡಲಾಯಿತು. ನಂತರದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿ ಸಂಸದರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಹಾಗೂ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಉಪಸ್ಥಿತರಿದ್ದರು.