ದಲಿತರಿಗಾಗಿ ಆರೆಸ್ಸೆಸ್‌ನ ಮೊಸಳೆ ಕಣ್ಣೀರು !

Update: 2019-11-26 05:53 GMT

‘‘ಇಂದಿಗೂ ನಮ್ಮ ಮನೆಯಲ್ಲಿ ಸಾಕಿದ ನಾಯಿಯನ್ನು ದಿನಪೂರ್ತಿ ತಬ್ಬಿಕೊಳ್ಳುತ್ತೇವೆ. ಅಲ್ಲದೆ ಅದನ್ನು ನಮ್ಮ ಹಾಸಿಗೆಯ ಮೇಲೆಯೇ ಮಲಗಿಸುತ್ತೇವೆ. ಡೈನಿಂಗ್ ಟೇಬಲ್ ಮೇಲೆಯೂ ಕೂರಿಸಿಕೊಳ್ಳುತ್ತೇವೆ. ಆದರೆ ದಲಿತರ ವಿಷಯ ಬಂದಾಗ ಅವರನ್ನು ಮನೆಯ ಹೊರಗೆ ನಿಲ್ಲಿಸುತ್ತೇವೆ. ಇದನ್ನು ನ್ಯಾಯ ಎಂದು ಯಾವ ಧರ್ಮ ಸಂಸ್ಕೃತಿ ಹೇಳುತ್ತದೆ?’’ ಈ ಮಾತನ್ನು ಆಡಿದವರು ಆರೆಸ್ಸೆಸ್‌ನ ಮುಖಂಡ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್. ರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಆಡಿದ ಮಾತುಗಳಿವು. ಇಷ್ಟೇ ಅಲ್ಲ ‘‘ರಸ್ತೆಯಲ್ಲಿ ಅಸ್ಪಶ್ಯತೆ ನಿವಾರಣೆಯಾಗಿದೆ ಎನ್ನುವ ನಾವು, ನಮ್ಮ ಮನದೊಳಗೆ ಅಸ್ಪಶ್ಯತೆ ನಿವಾರಣೆಯಾಗಿದೆಯೇ ಎಂದು ಕೇಳಿಕೊಳ್ಳಬೇಕು’’ ಎಂದಿದ್ದಾರೆ.

ಅಸ್ಪಶ್ಯತೆಯ ವಿರುದ್ಧ ಎಲ್ಲರೂ ಮಾತನಾಡುತ್ತಾರೆ. ಆದರೆ ಆರೆಸ್ಸೆಸ್‌ನ ನಾಯಕನೊಬ್ಬ ಬಹಿರಂಗವಾಗಿ ದಲಿತರ ಪರವಾಗಿ ಇಂತಹದೊಂದು ಹೇಳಿಕೆಯನ್ನು ನೀಡಿರುವುದು ಅಭಿನಂದನೀಯ. ಆರೆಸ್ಸೆಸ್‌ನ ಮೇಲೆ ಜಾತೀವಾದಿ, ಮನುವಾದಿ ಎಂಬ ಆರೋಪಗಳಿವೆ. ಬ್ರಾಹ್ಮಣ್ಯ ಅಥವಾ ವೈದಿಕ ಶಕ್ತಿಗಳು ಅವುಗಳನ್ನು ನಿಯಂತ್ರಿಸುತ್ತಿವೆ ಎನ್ನಲಾಗುತ್ತದೆ. ಸ್ವತಃ ಬಿ. ಎಲ್. ಸಂತೋಷ್ ಕೂಡ ಮೇಲ್ವರ್ಣೀಯ ಸಮುದಾಯದಿಂದ ಬಂದವರು. ಈ ಕಾರಣದಿಂದ, ದಲಿತರ ಶೋಷಣೆಗೆ ಯಾರು ಕಾರಣರಾಗಿದ್ದಾರೋ ಆ ಸಮುದಾಯದ ಪ್ರತಿನಿಧಿಗಳೇ ಅದರ ವಿರುದ್ಧ ಮಾತನಾಡುವುದು ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಇಂದು ಬದಲಾಗಬೇಕಾದವರು ದಲಿತರಲ್ಲ, ಅವರನ್ನು ಅಸ್ಪಶ್ಯತೆಯಿಂದ ಕಾಣುವ ಮೇಲ್‌ಜಾತಿಯ ಜನರು. ಇಂದು ದಲಿತರ ಬಡಾವಣೆಗಳಿಗೆ ಹೋಗಿ ಜಾಗೃತಿಯನ್ನು ಮಾಡುವ ಕೆಲಸ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಗ್ರಹಾರದಂತಹ ಕೇರಿಗಳಿಗೆ ಹೋಗಿ ಅವರೊಳಗಿನ ಜಾತಿಯ ಮೇಲರಿಮೆಗಳನ್ನು ತೊಲಗಿಸುವ ಕೆಲಸ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸಂತೋಷ್ ಅವರ ಮಾತುಗಳನ್ನು ನಾಡಿನ ಜನತೆ ಸಂತೋಷದಿಂದ ಸ್ವೀಕರಿಸಬೇಕಾಗುತ್ತದೆ.

ಆದರೆ ಈ ಮಾತುಗಳನ್ನು ಸಂತೋಷ್ ಕೇವಲ ‘ಸಂವಿಧಾನ ದಿನಾಚರಣೆಯ’ ಹಿನ್ನೆಲೆಯಲ್ಲಿ ಅಲ್ಲಿ ಸೇರಿರುವ ಕೆಲವು ದಲಿತ ಸಮುದಾಯದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದರೋ ಅಥವಾ ಮೇಲ್‌ಜಾತಿಗಳ ಮನಸ್ಥಿತಿಯನ್ನು ತಿದ್ದುವುದಕ್ಕಾಗಿ ಆಡಿದರೋ ಎನ್ನುವ ಅನುಮಾನ ಇನ್ನೂ ಉಳಿದೇ ಇದೆ. ಯಾಕೆಂದರೆ, ಆರೆಸ್ಸೆಸ್‌ನಲ್ಲಿ ಪ್ರಮುಖ ಸ್ಥಾನವನ್ನು ವಹಿಸಿಕೊಂಡಿರುವ ಸಂತೋಷ್ ಅವರಿಗೆ, ದಲಿತರ ಕುರಿತಂತೆ ಮೇಲ್‌ಜಾತಿಯ ಮನಸ್ಥಿತಿಯನ್ನು ಬದಲಿಸಲು ಆರೆಸ್ಸೆಸ್ ಸಂಘಟನೆಯ ಮೂಲಕವೇ ಸಾಕಷ್ಟು ಅವಕಾಶಗಳಿವೆ. ಆದರೆ ದಲಿತರ ಪರವಾಗಿ ಆರೆಸ್ಸೆಸ್ ಚಳವಳಿಗಳನ್ನು, ಕಾರ್ಯಕ್ರಮಗಳನ್ನು ರೂಪಿಸಿದ ಉದಾಹರಣೆಗಳೇ ಇಲ್ಲ. ‘ಸಂವಿಧಾನ ದಿನಾಚರಣೆ’ಯೇ ಇತ್ತೀಚಿನ ದಿನಗಳಲ್ಲಿ ವಿವಾದಕ್ಕೊಳಗಾಗಿದೆ. ಜನವರಿ 26ರ ಮಹತ್ವವನ್ನು ಅಳಿಸುವುದಕ್ಕಾಗಿ, ಅಂಬೇಡ್ಕರ್‌ರನ್ನು ಮರೆಮಾಡುವುದಕ್ಕಾಗಿ ಸಂವಿಧಾನ ದಿನಾಚರಣೆಯನ್ನು ಹುಟ್ಟು ಹಾಕಲಾಗಿದೆ ಎಂಬ ಮಾತುಗಳಿವೆ. ಇದಕ್ಕೆ ಪೂರಕವಾಗಿ, ಇದೇ ಸಂವಿಧಾನ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರದ ಬದಲಿಗೆ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರವನ್ನು ಹಾಕಿತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಿಕ ಮುಖರ್ಜಿಯ ಚಿತ್ರವನ್ನು ತೆಗೆದು ಅಂಬೇಡ್ಕರ್‌ರನ್ನು ಸ್ಥಾಪಿಸಲಾಯಿತು. ಇತ್ತೀಚೆಗೆ, ‘ಸಂವಿಧಾನವನ್ನು ಬರೆದವರು ಅಂಬೇಡ್ಕರ್ ಅಲ್ಲ’ ಎನ್ನುವ ಪ್ರಚಾರ ರಾಜ್ಯ ಸರಕಾರದ ಮೂಲಕವೇ ನಡೆಯಿತು. ಇವು ಕೂಡ ದಲಿತರು ಮತ್ತು ಸಂವಿಧಾನ ಪರವಾಗಿರುವ ಜನರನ್ನು ಆಕ್ರೋಶಕ್ಕೆ ಈಡು ಮಾಡಿತ್ತು. ಈ ಎಲ್ಲ ಕಾರಣಗಳಿಂದ ಸಂತೋಷ್ ಭಾಗವಹಿಸುವ ‘ಸಂವಿಧಾನ ದಿನಾಚರಣೆ’ಯನ್ನು ದಲಿತರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಸಮಾಧಾನಕ್ಕೀಡಾಗಿರುವ ದಲಿತರನ್ನು ಸಮಾಧಾನಿಸುವ ಭಾಗವಾಗಿ ಈ ವೇದಿಕೆಯಲ್ಲಿ ದಲಿತಪರವಾದ ಹೇಳಿಕೆಯನ್ನು ಸಂತೋಷ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಸಂತೋಷ್ ಅವರು ಬಿಜೆಪಿಯಲ್ಲೂ, ಆರೆಸ್ಸೆಸ್‌ನಲ್ಲೂ ಪ್ರಮುಖ ಹುದ್ದೆಯನ್ನು ಹೊಂದಿರುವುದರಿಂದ ದಲಿತರ ಕುರಿತಂತೆ ಮೇಲ್‌ಜಾತಿಯ ಜನರಲ್ಲಿ ಜಾಗೃತಿ ಮೂಡಿಸಲು ಅವರಿಗೆ ಹೆಚ್ಚು ಅವಕಾಶಗಳಿವೆ. ಇಂದು ಆರೆಸ್ಸೆಸ್‌ನ ಪ್ರಮುಖ ಹುದ್ದೆಗಳಲ್ಲಿ ಎಷ್ಟು ಜನ ದಲಿತ ನಾಯಕರಿದ್ದಾರೆ? ಎನ್ನುವ ಪ್ರಶ್ನೆಗೆ ಮೊದಲು ಸಂತೋಷ್ ಅವರು ಉತ್ತರವನ್ನು ಕಂಡುಕೊಳ್ಳಬೇಕು. ಹಿಂದುತ್ವದ ಹರಿಕಾರರು ಎನ್ನುವ ಆರೆಸ್ಸೆಸ್‌ನ ಪ್ರಮುಖ ಹುದ್ದೆಗಳಲ್ಲಿ ದಲಿತ ನಾಯಕರನ್ನು ತಂದು ಕೂರಿಸಿದಾಗ, ಪೇಜಾವರಶ್ರೀಯಂತಹ ನಾಯಕರು ತಮ್ಮ ಮಠಗಳಲ್ಲಿ ಜಾತಿ ಪಂಕ್ತಿಯನ್ನು ಅಳಿಸಿ ದಲಿತರ ಜೊತೆಗೆ ಊಟ ಮಾಡಿದಾಗ ಸಹಜವಾಗಿಯೇ ಉಳಿದ ಶ್ರೀಸಾಮಾನ್ಯರು ಅದನ್ನು ಅನುಸರಿಸತೊಡಗುತ್ತಾರೆ. ಈ ನಿಟ್ಟಿನಲ್ಲಿ ಆರೆಸ್ಸೆಸ್‌ನಂತಹ ಸಂಘಟನೆಗಳ ಹೊಣೆಗಾರಿಕೆ ಬಹುದೊಡ್ಡದಿದೆ. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಆಡಿದ ಮಾತುಗಳನ್ನು, ಶ್ಯಾಮ್ ಪ್ರಸಾದ್ ಮುಖರ್ಜಿಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ತಿಳಿಸಿಕೊಡುವ ಧೈರ್ಯವನ್ನು ಸಂತೋಷ್ ತೋರಿಸಬೇಕು. ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ದಲಿತರನ್ನುದ್ದೇಶಿಸಿ ದಲಿತರ ಪರವಾಗಿ ಅನುಕಂಪದ ಮಾತುಗಳನ್ನಾಡುವುದರಿಂದ ಯಾವ ಪ್ರಯೋಜನವೂ ಆಗದು. ಎಲ್ಲಿ ದಲಿತರ ಮೇಲೆ ಸಾಮೂಹಿಕ ಬಹಿಷ್ಕಾರಗಳು ನಡೆಯುತ್ತವೆಯೋ, ಎಲ್ಲಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆಯುತ್ತವೆಯೋ ಅಲ್ಲಿಗೆ ಆರೆಸ್ಸೆಸ್ ಕಾರ್ಯಕರ್ತರು ಧಾವಿಸಬೇಕು. ಆರೋಪಿಗಳನ್ನು ಬಂಧಿಸಲು ಸರಕಾರವನ್ನು ಒತ್ತಾಯಿಸಬೇಕು. ಸಾಧಾರಣವಾಗಿ ಯಾವುದೇ ಹಲ್ಲೆ ದೌರ್ಜನ್ಯಗಳು ನಡೆದರೂ ಆರೆಸ್ಸೆಸ್ ಅಥವಾ ಸಂಘಪರಿವಾರ ಸಂಘಟನೆಗಳು ಅದಕ್ಕೆ ಪ್ರತಿಕ್ರಿಯಿಸಬೇಕಾದರೆ ಹಲ್ಲೆ ನಡೆಸಿದವರು ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರಬೇಕು. ಅವರಿಗೆ ಹಲ್ಲೆಗೊಳಗಾದ ಜನರು ಮುಖ್ಯವಲ್ಲ, ಹಲ್ಲೆ ನಡೆಸಿದವರು ಯಾರು ಎನ್ನುವುದು. ಉತ್ತರ ಭಾರತದಲ್ಲಿ ಪ್ರಬಲ ಜಾತಿಗಳಿಂದ ದಲಿತರ ಮೇಲೆ ಸಾಮೂಹಿಕವಾಗಿ ಹಲ್ಲೆಗಳು ನಡೆಯುತ್ತಿವೆ. ದಲಿತರು ಪ್ರತಿಭಟನೆ ನಡೆಸುವಂತಹ ಹಕ್ಕುಗಳನ್ನೇ ನಿಧಾನಕ್ಕೆ ಕಳೆದುಕೊಳ್ಳುತ್ತಿದ್ದಾರೆ. ಇವರ ಪರವಾಗಿ ನಿಂತು ಮಾತನಾಡುವ ಎದೆಗಾರಿಕೆಯನ್ನು ಎಲ್ಲಿಯವರೆಗೆ ಆರೆಸ್ಸೆಸ್‌ನಂತಹ ಸಂಘಟನೆಗಳು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರ ದಲಿತ ಪ್ರೇಮ ಬರೇ ಬೂಟಾಟಿಕೆಯಾಗಿರುತ್ತದೆ.

ಇದೆಲ್ಲದರ ಜೊತೆಗೆ ಮೀಸಲಾತಿಯ ಕುರಿತಂತೆಯೂ ಆರೆಸ್ಸೆಸ್ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು. ಜಾತಿ ಇದ್ದುದರಿಂದ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕಾಯಿತು. ಇಂದಿಗೂ ಮೀಸಲಾತಿ ತನ್ನ ಉದ್ದೇಶವನ್ನು ಸಾಧಿಸಿಕೊಂಡಿಲ್ಲ. ಕಾರಣ, ಮೀಸಲಾತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮೇಲ್‌ಜಾತಿಯ ಜನರು ಅವಕಾಶ ನೀಡುತ್ತಿಲ್ಲ. ಆದರೆ ಆರೆಸ್ಸೆಸ್ ಮೀಸಲಾತಿಯನ್ನೇ ಇಲ್ಲವಾಗಿಸಬೇಕು ಎಂದು ಹೊರಟಿದೆ. ಎಲ್ಲಿಯವರೆಗೆ ಈ ದೇಶದಲ್ಲಿ ಜಾತೀಯತೆ ತಾಂಡವವಾಡುತ್ತಿರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಜಾರಿಯಲ್ಲಿರಲೇಬೇಕಾಗುತ್ತದೆ. ಆರೆಸ್ಸೆಸ್ ಮೀಸಲಾತಿಯ ಯಶಸ್ವಿ ಜಾರಿಗೆ ತನ್ನ ಯಾವ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎನ್ನುವುದನ್ನು ಸಂತೋಷ್ ಮೊದಲು ಬಹಿರಂಗಪಡಿಸಲಿ. ಆಗ ಸಂತೋಷ್ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News