×
Ad

ಸಂವಿಧಾನ ವಿರೋಧಿ ಸುತ್ತೋಲೆ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ರ‍್ಯಾಲಿ

Update: 2019-11-26 19:47 IST

ಬೆಂಗಳೂರು, ನ.26: ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದಿದ್ದ ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಸಂವಿಧಾನ ವಿರೋಧಿ ನಿಲುವುಳ್ಳ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ನಗರದಲ್ಲಿಂದು ಬೃಹತ್ ಪ್ರತಿಭಟನಾ ಐಕ್ಯತಾ ಸಮಾವೇಶ ನಡೆಸಲಾಯಿತು.

ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೂ ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಸಿ, ಕೂಡಲೇ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ದಲಿತ ಮುಖಂಡರು, ಧಾರ್ಮಿಕ ಮುಖಂಡರು, ಸಂವಿಧಾನಶಿಲ್ಪಿ ಅಂಬೇಡ್ಕರ್‌ಗೆ ಅವಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನವನ್ನೇ ರಚಿಸದೆ ಇದ್ದಿದ್ದರೆ ಶೂದ್ರರು, ಹಿಂದುಳಿದ ವರ್ಗದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ಮಕ್ಕಳ ಮೂಲಕ ಸಂವಿಧಾನವನ್ನು ಅಂಬೇಡ್ಕರ್ ರಚಿಸಿಲ್ಲ ಎಂಬ ಹಸಿ ಸುಳ್ಳನ್ನು ಲಕ್ಷಾಂತರ ಜನರ ನಡುವೆ ಹರಿಬಿಡಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದು ಅತ್ಯಂತ ಕ್ರೂರ ಮನಸ್ಥಿತಿಯಾಗಿದೆ. ಸಂವಿಧಾನ ದಿನ ಆಚರಿಸಿ ಎಂದು ಸುತ್ತೋಲೆ ಹೊರಡಿಸಿ, ಅದರ ಜತೆಗಿನ ಮಾರ್ಗದರ್ಶಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ ಹಾಗೂ ಇದಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ಎಲ್ಲರೂ ಸರಕಾರವನ್ನು ಆಗ್ರಹಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಭಾರತದ ಅಖಂಡತೆಯನ್ನು ಗಟ್ಟಿಯಾಗಿ ಹಿಡಿದಿರುವ ಏಕೈಕ ಧರ್ಮಗ್ರಂಥ ಸಂವಿಧಾನ, ನಾವೆಲ್ಲರೂ ಅದರ ಅಡಿಯಾಳುಗಳು. ಸಂವಿಧಾನದ ಉಳಿವು ಎಂದರೆ ಭಾರತದ ಉಳಿವು ಆಗಿದೆ. ಆದರೆ, ಇಂದು ಕೆಲವರು ಅದನ್ನೇ ನಾಶಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಇತ್ತೀಚಿಗೆ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಶಾಲೆಗಳಿಗೆ ಸಂವಿಧಾನ ದಿನ ಆಚರಿಸುವ ಸಂಬಂಧ ಸುತ್ತೋಲೆ ಹೊರಡಿಸಿದೆ. ಅದರೊಂದಿಗೆ ಮಾರ್ಗಸೂಚಿ ನೀಡಿದ್ದು, ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂಬ ಸುಳ್ಳೊಂದನ್ನು ಮಕ್ಕಳ ತಲೆಗೆ ತುಂಬುವ ಷಡ್ಯಂತರ ಮಾಡಲಾಗಿದೆ. ಇದು ಅಂಬೇಡ್ಕರ್‌ಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ತಿಳಿಸಿದರು.

ದಲಿತ ಮುಖಂಡ ವಿ.ಗೋಪಾಲ್ ಮಾತನಾಡಿ, ಅಂಬೇಡ್ಕರ್ ಸಂವಿಧಾನ ರಚಿಸಿದ ನಂತರ, ದೇಶದಲ್ಲಿ ಬ್ರಾಹ್ಮಣರು, ರಾಜರು ಸೇರಿದಂತೆ ಪುರುಷರಿಗಷ್ಟೇ ಇದ್ದ ಮತದಾನದ ಹಕ್ಕನ್ನು ಎಲ್ಲರಿಗೂ ಸಿಗುವಂತಾಯಿತು. ಅಲ್ಲದೆ, ಅಂದಿನ ಜನಪ್ರತಿನಿಧಿಗಳಲ್ಲಿ ದಲಿತರಿಗೆ ಮೀಸಲಾತಿ ಸಿಗುವಂತಾಯಿತು ಎಂದರು.

ಸಮಾವೇಶದಲ್ಲಿ ಬೌದ್ಧ ಗುರು ಭಂತೇಜಿ, ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸೂಫಿ ಸಂತ ನೂರುಲ್ಲಾ ಶಾ ಖಾದ್ರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಡಿಎಚ್‌ಎಸ್‌ನ ಗೋಪಾಲಕೃಷ್ಣ ಅರಳಹಳ್ಳಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು, ದಲಿತ ಮುಖಂಡರು ಉಪಸ್ಥಿತರಿದ್ದರು.

ಸಮಾವೇಶಕ್ಕೆ ಸಂವಿಧಾನ ಪರವಾದ ಎಲ್ಲ ಧರ್ಮಗುರುಗಳು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು, ಹಿಂದುಳಿದ ವರ್ಗದ ಸಂಘಟನೆಗಳು, ಮಹಿಳಾ, ಒಬಿಸಿ, ಎಸ್ಸಿ, ಎಸ್ಟಿ ನೌಕರರ ಸಂಘಟನೆಗಳು, ವಿದ್ಯಾರ್ಥಿ-ಯುವಜನ ಸಂಘಟನೆಗಳು, ಗುತ್ತಿಗೆದಾರರ ಸಂಘಟನೆಗಳು, ಕಾಲೇಜು-ಹಾಸ್ಟೆಲ್ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದ್ದರು.

ಬೇಡಿಕೆಗಳು...

- ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು.

- ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು.

- ಪ್ರತಿ ಶಾಲೆಯಲ್ಲಿ ತಿಂಗಳಿಗೊಮ್ಮೆ ಸಂವಿಧಾನದ ಕುರಿತು ಅರಿವು ಮೂಡಿಸಬೇಕು.

- ವೈಜ್ಞಾನಿಕ ಸಂವಿಧಾನ ಅರಿವಿನ ಕೈಪಿಡಿಯನ್ನು ಪರಿಗಣಿಸಬೇಕು.

- ಶಾಲಾ-ಕಾಲೇಜುಗಳಲ್ಲಿ ನಾಡಗೀತೆ ಅಥವಾ ರಾಷ್ಟ್ರಗೀತೆ ಬಳಿಕ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News