ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ: ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್
ಬೆಂಗಳೂರು, ನ.26: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಣ. ಅವರು ಈ ಮೈತ್ರಿ ಸರಕಾರವನ್ನು ಒಪ್ಪಿಕೊಂಡಿರಲಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳೀಧರ್ ರಾವ್ ಆರೋಪಿಸಿದರು.
ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 17 ಶಾಸಕರು ಸರಕಾರದ ವೈಫಲ್ಯ ಪ್ರತಿಭಟಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಆಲೋಚನೆಯೊಂದಿಗೆ ಬಿಜೆಪಿ ಸೇರಿ ಚುನಾವಣೆಗೆ ಮತ್ತೆ ಸ್ಪರ್ಧಿಸಿದ್ದಾರೆ ಎಂದರು.
ಸರಕಾರ ಬೀಳುವುದಕ್ಕೆ ಬಿಜೆಪಿ ಕಾರಣವಲ್ಲ. ಸಿದ್ದರಾಮಯ್ಯ ಹತಾಶರಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದಿನನಿತ್ಯ ಮಾಧ್ಯಮಗಳಲ್ಲಿ ತಲೆಬರಹಗಳಲ್ಲಿ ಬರಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವೈಫಲ್ಯ ಮತ್ತು ಈ ಪಕ್ಷಗಳ ನಾಯಕತ್ವ ವೈಫಲ್ಯದಿಂದ ಉಪ ಚುನಾವಣೆ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಆದರೂ, ಅಪವಿತ್ರ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳು ಸರಕಾರ ರಚಿಸಿದ್ದವು ಎಂದು ಮುರಳೀಧರ್ ರಾವ್ ಹೇಳಿದರು.
ಕುಮಾರಸ್ವಾಮಿ ಆಪಾದನೆಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಪಕ್ಷದ ಕಾರ್ಯಸೂಚಿಯನ್ನು ಜನರ ಮುಂದಿಡಬೇಕು. ಬಿಜೆಪಿ ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಅವರ ಸರಕಾರ ಅಧಿಕಾರದಲ್ಲಿದ್ದಾಗ ಜವಾಬ್ದಾರಿಯುತ ಪ್ರತಿಪಕ್ಷವಾಗಿ ನೇರ ಆಪಾದನೆಗಳನ್ನು ಮಾಡಿತ್ತು ಎಂದು ಅವರು ತಿಳಿಸಿದರು.
ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡಿದರೆ ಸರಕಾರ ರಚನೆಯಾಗುವುದಿಲ್ಲ. ಇನ್ನು ಕಾಂಗ್ರೆಸ್‌ಗೆ ಮತ ನೀಡಿದರೆ, ಮಧ್ಯಂತರ ಚುನಾವಣೆಗೆ ಆಹ್ವಾನ ಎಂದೇ ಅರ್ಥ. ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರಿಗೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬೇಕಿಲ್ಲ ಎಂದು ಮುರಳೀಧರ್ ರಾವ್ ಹೇಳಿದರು.
ಸ್ಥಿರ ಮತ್ತು ಜನಪರ ಸರಕಾರ ಬೇಕಿದೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿ ಉಪ ಚುನಾವಣೆ ನಡೆಯುತ್ತಿರುವ ಎಲ್ಲ 15 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಗೆಲ್ಲದಿದ್ದರೆ ಸಿದ್ದರಾಮಯ್ಯ ಜನರಿಗೆ ಏನು ಉತ್ತರ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಲೇಹರ್‌ಸಿಂಗ್, ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಉಪಸ್ಥಿತರಿದ್ದರು.