ಪತ್ನಿಯ ಕೊಲೆಗೈದು ಆತ್ಮಹತ್ಯೆಗೆ ಶರಣಾದ ಪತಿ
Update: 2019-11-26 21:40 IST
ಬೆಂಗಳೂರು, ನ.26: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯೋರ್ವ ತನ್ನ ಪತ್ನಿಯ ಮೇಲೆ ದಾಳಿ ನಡೆಸಿ, ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿ ವಸಂತಾ ಎಂಬಾಕೆ ಕೊಲೆಯಾದ ಪತ್ನಿಯಾಗಿದ್ದು, ಮುರುಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಪತಿ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಮುರುಗೇಶ್ 15 ವರ್ಷಗಳ ಹಿಂದೆ ವಸಂತಾ ಅವರನ್ನು ಮದುವೆಯಾಗಿದ್ದರು. ಆರಂಭದಿಂದಲೂ ಪತ್ನಿ ವಸಂತಾ ನಡವಳಿಕೆ ಬಗ್ಗೆ ಮುರುಗೇಶ್ ಅನುಮಾನ ಹೊಂದಿದ್ದ. ಆಕೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನದಿಂದ ಆಗಾಗ ಆಕೆಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರವಾಗಿ ಸೋಮವಾರ ರಾತ್ರಿ ದಂಪತಿ ನಡುವೆ ಜಗಳ ಉಂಟಾಗಿ ಮುರುಗೇಶ್ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.