ಬೆಂಗಳೂರು: ಮಂದಿರ ಕೆಡವಿದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ನ.27: ಕಲಬುರ್ಗಿ ಜಿಲ್ಲೆಯ ಮಾದಿಹಾಳ್ ತಾಂಡದಲ್ಲಿದ್ದ ಸಂತ ಸೇವಾಲಾಲ್ ಮಂದಿರವನ್ನು ಧ್ವಂಸ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಅಗ್ರಹಿಸಿ ನಗರದ ಪುರಭವನದ ಮುಂಭಾಗ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಂತ ಸೇವಾಲಾಲ್ ಬಂಜಾರ ಸಮುದಾಯದ ಆರಾಧ್ಯದೈವ. ಸಾಮಾಜಿಕ ಜಾಗೃತಿಯ ಹರಿಕಾರ. ಕ್ರಿಮಿನಲ್ ಟ್ರೈಬ್ ಹೆಸರಲ್ಲಿ ಬಂಜಾರರನ್ನು ಹತ್ತಿಕ್ಕುತ್ತಿದ್ದಾಗ ಬ್ರಿಟಿಷರ ವಿರುದ್ಧ ಸೆಣಸಾಡಿ ಸಮುದಾಯವನ್ನು ಸಂಘಟಿಸಿದ ವೀರ. ಪಶುಪಾಲನೆ, ಕೃಷಿ, ವ್ಯಾಪಾರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಮಹಾ ಜ್ಞಾನಿ ಸೇವಾಲಾಲ್. ಇವರ ಮಂದಿರವನ್ನು ಧ್ವಂಸ ಮಾಡುವ ಮೂಲಕ ಸರಕಾರ ಬಂಜಾರರ ಭಾವನೆಗಳನ್ನು ಕೆರಳಿಸಿದೆ ಎಂದು ಸಮುದಾಯದ ಹೋರಾಟಗಾರ ಅನಂತ್ ನಾಯ್ಕಾ ಬೇಸರ ವ್ಯಕ್ತಪಡಿಸಿದ್ದಾರೆ.
ಸೇವಾಲಾಲ್ ದೇವಸ್ಥಾನ ಧ್ವಂಸ ಮಾಡಲು ಆದೇಶ ಮಾಡಿದ ಅಧಿಕಾರಿಗಳು, ಕುಮ್ಮಕ್ಕು ನೀಡಿದವರು ಹಾಗೂ ಧ್ವಂಸ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಳ್ಳಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹಾಗೂ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕೆಂದು ಅವರು ಒತ್ತಾಯಿಸಿದರು.
ಲಂಬಾಣಿ ಸಮುದಾಯದ ಕೃಷಿ ಭೂಮಿ ಕಿತ್ತುಕೊಂಡ ಜಾಗದಲ್ಲಿಯೇ ಸ್ಥಾಪಿಸಲಾದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ’ಶ್ರೀಸೇವಾಲಾಲ್ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡಬೇಕು. ಹಾಗೂ ಕಲಬುರ್ಗಿ ವಿಮಾನ ನಿಲ್ದಾಣ ನಿರ್ಮಿಸಲು ಬಂಜಾರರು ಜೀವನೋಪಾಯದ ನೂರಾರು ಎಕರೆ ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಹಾಗಾಗಿ ಭೂಮಿ ಕಳೆದುಕೊಂಡ ಲಂಬಾಣಿಗರಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದ ಮುಖಂಡರಾದ ರಾಜ್‌ಮೋಹನ್, ರುದ್ರ ಪುನಿತ್, ಡಾ.ಪಂಕಜಾ ಬಾಯಿ, ಡಾ.ಬೊಜ್ಯಾನಾಯಕ್, ಡಾ.ರಾಜುನಾಯತ್ ಮತ್ತಿತರರು ಭಾಗವಹಿಸಿದ್ದರು.