ಇವರಿಬ್ಬರಿಗೆ ಹುಟ್ಟಿದ ಮಗ ನಾನು...

Update: 2019-11-28 04:50 GMT

ಡಾ. ಎಂ. ಎಂ. ಕಲಬುರ್ಗಿ 

ಹಿಂದೂ ಸಾಮಾಜಿಕ ವ್ಯವಸ್ಥೆಯ ಚಾತುರ್ವರ್ಣ ಪದ್ಧತಿಯಲ್ಲಿ ಶೂದ್ರನದು ತೀರ ಕೆಳಗಿನದಾದ ನಾಲ್ಕನೆಯ ಸ್ತರ. ಇಲ್ಲಿ ಸಂಗಮಾಡಿದವರು ಆ ಶೂದ್ರರೂ ಅಲ್ಲ; ಅವರ ದಾಸರೂ ಅಲ್ಲ; ಆ ದಾಸರ ಮಕ್ಕಳು-ಎಂದು ಹೇಳುವಲ್ಲಿ ‘ಜನನ’ದ ಕೀಳ್ತನವನ್ನು ಇಲ್ಲ್ಲಿ ಇನ್ನೂ ಕೆಳಗಿನ ಸ್ತರಕ್ಕೆ ಇಳಿಸಲಾಗಿದೆ. ಈ ದಾಸರ ಮಕ್ಕಳಾದರೂ ವಿಧ್ಯುಕ್ತವಾಗಿ ಮದುವೆಯಾದವರಲ್ಲ. ಅದೂ ಹೋಗಲಿ, ಗೌರವದಿಂದ ಸಂಗಿಸಿದವರಲ್ಲ; ಬೆರಣಿ ಆಯ್ಕೆಯಂತಹ ಕ್ಷುಲ್ಲಕ ಕೆಲಸಕ್ಕೆ ಹೋಗಿ,‘‘ಅನಾಗರಿಕವಾಗಿ’’ ಬಯಲಲ್ಲಿ ಕೂಡಿದವರು, ಎಂದು ಮುಂತಾಗಿ ಹೇಳುವಲ್ಲಿ ಈ ಸ್ತರ ಇನ್ನೂ ಕೆಳಗಿಳಿದು, ‘ಜನನ’ದ ಬಗೆಗೆ ಬಸವಣ್ಣನವರು ತಳೆದಿದ್ದ ತೀಕ್ಣ ನಿರ್ಲಕ್ಷಭಾವ ಮತ್ತೂ ಸ್ಪಷ್ಟವಾಗುತ್ತದೆ.

ಚೆನ್ನಯ್ಯನ ಮನೆಯ ದಾಸನ ಮಗನು,

ಕಕ್ಕಯ್ಯನ ಮನೆಯ ದಾಸಿಯ ಮಗಳು,

ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು.

ಇವರಿಬ್ಬರಿಗೆ ಹುಟ್ಟಿದ ಮಗ ನಾನು; ಕೂಡಲಸಂಗಮದೇವ ಸಾಕ್ಷಿಯಾಗಿ.

ಇದು ಜನನ ವರ್ಗ ನಿರಸನ ವಚನ. ಇಲ್ಲಿಯ ಒಂದೆರಡು ಶಬ್ದಗಳಿಗೆ ಬೆಚ್ಚಿ ಇಲ್ಲವೇ ಬೆರಗಾಗಿ ಕೆಲವರು ಇದು ಪ್ರಕ್ಷಿಪ್ತರಚನವೆಂದೋ, ಬೆಡಗಿನ ವಚನವೆಂದೋ, ಅನುಭಾವದ ವಚನವೆಂದೋ ಹೇಳಿ ಈ ವಚನದ ತೇಜೋವಧೆ ಮಾಡುತ್ತಲಿರುವುದು ವ್ಯಸನದ ಸಂಗತಿ. ಇಂತಹ ಪಂಡಿತರಿಂದ ಇದನ್ನು ರಕ್ಷಿಸುವುದೆಂದರೆ ಇದಕ್ಕೆ ಸರಿಯಾದ ಅರ್ಥ ಹೇಳುವುದು.

ಮನುಷ್ಯನ ಅಹಂಭಾವದ ಅನೇಕ ನೆಲೆಗಳಲ್ಲಿ ‘ಜನನ’ ಮೂಲವೂ ಮುಖ್ಯ ಆಗಿದೆ. ಅದು ಸಮಾಜದ ವ್ಯಕ್ತಿಯ ಕುಲಗೋತ್ರಗಳನ್ನು ನಿರ್ಧರಿಸುವ ಮಾನದಂಡವೆನಿಸಿದ್ದು, ಒಳ್ಳೆಯ ಕುಲ ಸ್ಪಶ್ಯತೆಯನ್ನು, ಒಳ್ಳೆಯ ಗೋತ್ರ ಸಾಮಾಜಿಕ ಪ್ರತಿಷ್ಠೆಯನ್ನು ಒದಗಿಸುತ್ತವೆೆ. ಹೀಗಾಗಿ ಇವುಗಳ ಆಕರ್ಷಣೆಗೆ ಮನಸೋತು ಕುಲಜ, ಗೋತ್ರಜ ಎನಿಸಿಕೊಳ್ಳಲು ಅನೇಕರು ಮಮಕರಿಸುವುದು ತೀರ ಸ್ವಾಭಾವಿಕವಾಗಿದೆ.

‘ಕುಲಮದ’ ಶರಣರ ಕಾಲದಲ್ಲಿ ರಾಕ್ಷಸವಿಸ್ತಾರದಲ್ಲಿ ಬೆಳೆಯುತ್ತಲಿದ್ದಿತು. ಈ ಮಾತಿಗೆ ‘‘ಕೊಂಬಲ್ಲಿ ಕೂಡುವಲ್ಲಿ ಕುಲವನರಸುವರು’’ ‘ಕುಲವನರಸದಿರಿಂಭೋ’ ಎಂಬ ಶರಣರ ಹೇಳಿಕೆಗಳು, ಎಚ್ಚರಿಕೆಗಳು ನಿದರ್ಶನವೆನಿಸಿವೆ. ಇಂಥವರಿಗೆ ನೀವು ‘ಕುಲಜನೆಂಬುದಕ್ಕೆ ಆವುದು ದೃಷ್ಟ?’ ಎಂಬ ಪ್ರಶ್ನೆ ಎಸೆದು ನಿರುತ್ತರಗೊಳಿಸುತ್ತಾರೆ, ಬಸವಣ್ಣನವರು. 12ನೆಯ ಶತಮಾನದಲ್ಲಿ ಹೀಗೆ ಕುಲೀನ, ಕುಲಹೀನ ವರ್ಗಗಳು ಅಸ್ತಿತ್ವದಲ್ಲಿದ್ದಂತೆಯೇ ಕುಲಹೀನರು ಕುಲೀನರಾಗಲು ಹಂಬಲಿಸುತ್ತಿದ್ದರು. ಅಂದರೆ ‘‘ಹಾರುವರೆಲ್ಲ ನೆರೆದು ಶೂದ್ರನ ಹಾರುವನ ಮಾಡುವ’’ ಉಪಕ್ರಮಗಳು ಬ್ರಾಹ್ಮಣರಿಂದ ಜರುಗುತ್ತಲಿದ್ದವು. ‘ಬಡಗಿಮಾಚಲದೇವಿ’ಯನ್ನು ಪುರೋಹಿತರು ‘ಕುಲಜೆಯ ಮಾಡಿದ’ರೆಂಬುದಂತೂ ಕುಲಹೀನರು ಕುಲೀನರಾಗಲು ಹಂಬಲಿಸುತ್ತಿದ್ದುದನ್ನು ಸ್ವಷ್ಟಪಡಿಸುತ್ತದೆ. ಆದರೆ ಬಸವಣ್ಣನವರು ‘‘ಹೊಲೆಯೊಳಗೆ ಹುಟ್ಟಿ ಕುಲವನರಸುವೆ ಎಲ್ಲವೋ’’ ಎನ್ನುತ್ತ ಹೆಣ್ಣಿನ ‘ಹೊಲೆ’ಯಲ್ಲಿ ಹುಟ್ಟಿದ್ದುದನ್ನು ನೆನಪಿಗೆ ತಂದು, ಇಂತಹವರ ಜನನ ಪ್ರತಿಷ್ಠೆಯ ಮದ ಕರಗುವಂತೆ ಮಾಡುತ್ತಾರೆ.

ಕುಲದಲ್ಲಿಯೇ ಮತ್ತೆ ಸೂಕ್ಷ್ಮ ಪ್ರತಿಷ್ಠೆ, ಗೋತ್ರ, ತಮ್ಮದ್ದು ಖುಷಿಮೂಲದ ಪವಿತ್ರ ರಕ್ತವೆಂಬುದನ್ನು ತೋರಿಸಿಕೊಳ್ಳಲು ಮೇಲುವರ್ಗದವರು ಅನೇಕ ಗೋತ್ರಗಳನ್ನು ಬೆಳೆಸಿಕೊಂಡಿದ್ದರು. ಜೊತೆಗೆ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ರಾಜರು ಮೊದಲಾದ ಅಧಿಕಾರಿಗಳು ಬ್ರಾಹ್ಮಣರಿಂದ ‘ಗೋತ್ರ’ ಸಂಪಾದಿಸಿ, ಕೃತಕಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಲಿದ್ದರು. ಹೀಗಾಗಿ ಗೋತ್ರವಿಲ್ಲದವರಿಗೆ ಸಮಾಜದಲ್ಲಿ ತಲೆ ತಗ್ಗಿಸುವ ಪರಿಸ್ಥಿತಿಯುಂಟಾಗಿದ್ದಿತು. ‘‘ಗೋತ್ರನಾಮವ ಬೆಸಗೊಂಡಡೆ ಮಾತ ನೂಕದೆ ಸುಮ್ಮನಿದ್ದಿರಿದೇನಯ್ಯ? ತಲೆಯ ಕುತ್ತಿ ನೆಲನನೇನ ಬರೆಯುತ್ತಿದ್ದಿರಯ್ಯ?’’ ಎಂಬ ಮಾತು ಗೋತ್ರವಿಲ್ಲದವರು ಅನುಭವಿಸುತ್ತಿದ್ದ ಅಪಮಾನವನ್ನು ಧ್ವನಿಸುತ್ತದೆ. ಇಲ್ಲಿಯೇ ಮುಂದುವರಿದು ‘‘ಗೋತ್ರ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು. ಕೂಡಲಸಂಗಮದೇವಾ?’’ ಎನ್ನುತ್ತ, ಗೋತ್ರಕ್ಕೆ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯರ ಹೆಸರನ್ನು ಅಂಟಿಸಿಕೊಂಡು ಗೋತ್ರಗರ್ವವನ್ನು ಧಿಕ್ಕರಿಸುತ್ತಾರೆ.

ಈ ಕುಲ- ಗೋತ್ರಗಳನ್ನು ನಿರ್ಧರಿಸುವುದು, ‘ಜನನ’ ಆದುದರಿಂದ ‘ಜನನ’ವೆಂಬುದು ಕುಲ-ಗೋತ್ರಗಳೆಂಬ ಅಹಂಭಾವಗಳನ್ನೊಳಗೊಂಡ ಇನ್ನೂ ದೊಡ್ಡ ಅಹಂಭಾವವಾಗಿದೆ. ಇಂಥ ಅರ್ಥರಹಿತ ‘ಜನನಪ್ರತಿಷ್ಠೆ’ಯ ನಿಜಸ್ವರೂಪವನ್ನು ರೊಚ್ಚಿನಿಂದ ತಿಳಿಸಿಹೇಳಿದ ‘ಜನನಮೋಹವಿಡಂಬನ’ ವಚನವಿದು. ವ್ಯಕ್ತಿಯ ಜನನಕ್ಕೆ ತಂದೆತಾಯಿಗಳ ಶುಕ್ಲ- ಶೋಣಿತಗಳು ಮುಖ್ಯ ಅವರ ಕುಲಗೋತ್ರಗಳು ಆಕಸ್ಮಿಕ. ಈ ಸತ್ಯವನ್ನು ಸಾರಿ, ಪ್ರತಿಷ್ಠಿತರ ‘ಜನನಜಂಭ’ವನ್ನು ನಿರಸಗೊಳಿಸಲೋಸುಗ ತಾವು ಮಾದಿರಾಜ ಮಾದಲಾಂಬಿಕೆಯರ ಮಗನೆಂಬುದನ್ನು ಉಪೇಕ್ಷಿಸಿ, (ಮಾದಾರ) ಚೆನ್ನಯ್ಯನ ದಾಸ, (ಡೋಹರ) ಕಕ್ಕಯ್ಯನ ದಾಸಿಯರ ಮಗನೆಂದು ಇಲ್ಲಿ ಕಟುವಾಗಿಯೇ ಹೇಳಿಕೊಳ್ಳುತ್ತಾರೆ. ಜನನಮಹತ್ವವನ್ನು ಕವಡೆಗೆ ಕಡೆಯಾಗಿ ಕಂಡು, ನೆರವಾಗಿ ತಮ್ಮ ಜನನ ಗರ್ವವನ್ನು ತುಳಿದುಕೊಳ್ಳುತ್ತಾರೆ. ಜೊತೆಗೆ ನಮ್ಮ ಜನನ ಗರ್ವವನ್ನೂ ತುಳಿದುಹಾಕತ್ತಾರೆ. ಹೀಗೆ ‘ಸ್ವ-ಜನನ’ ಭರ್ತ್ಸನೆಯ ಮೂಲಕ ನಮ್ಮೆಲ್ಲರ ‘ಜನಮನದ’ವೂ ಕರಗುವಂತೆ ಮಾಡುವ ಬಸವಣ್ಣನವರ ಈ ವಚನ ವಾಚಾರ್ಥವನ್ನು ಮೀರಿ ನಿಲ್ಲುತ್ತದೆ.

ವೀರಶೈವದಲ್ಲಿ ಅಂಗಕ್ಕೆ ಈ ಲಿಂಗತ್ವ ಪ್ರಾಪ್ತವಾಗುವುದು ದೀಕ್ಷಾತ್ರಯದಿಂದ. ಇವುಗಳಲ್ಲಿ ಮೊದಲು ವೇಧಾದೀಕ್ಷೆಯು ಆಣವಮಲವನ್ನು ನಿವಾರಿಸಿ ಜನನಗರ್ವವನ್ನು, ಆ ಮೇಲೆ ಮಂತ್ರದೀಕ್ಷೆಯು ಮಾಯಾಮಲವನ್ನು ನಿವಾರಿಸಿ ವರ್ಣಗರ್ವವನ್ನು ಕೊನೆಗೆ ಕ್ರಿಯಾದೀಕ್ಷೆಯು ಕಾರ್ಮಿಕಮಲವನ್ನು ನಿವಾರಿಸಿ ವರ್ಗ (ಅಧಿಕಾರ-ಸಂಪತ್ತು) ಗರ್ವವನ್ನು ಕೊಚ್ಚಿ ಹಾಕುತ್ತವೆ. ಇದನ್ನು ಗಮನಿಸಿದರೆ ಆಣವಮಲಾವೃತನಾದವನು ಮಾತ್ರ ಜನನಗರ್ವದಿಂದ ವಿಜೃಂಬಿಸುವನೆಂದೂ, ಈ ವಚನ ಜನನಗರ್ವಭಂಗದ ವೇಧಾದೀಕ್ಷೆಯನ್ನು ಪ್ರತಿನಿಧಿಸುವುದೆಂದೂ ಸ್ಪಷ್ಟವಾಗುತ್ತದೆ. ಇಂಥ ವೇಧಾದೀಕ್ಷೆಯಿಂದ ‘‘ಇವನು ನನ್ನ ತಂದೆ’ ಇವಳು ನನ್ನ ತಾಯಿ’’ ಎಂಬ ಸಂಕುಚಿತಭಾವ (ಆಣವಮಲದಿಂದುಂಟಾದ ಅಣುಭಾವ) ತೊಲಗಿ, ‘‘ತಂದೆ ನೀನು, ತಾಯಿ ನೀನು’’ ಎಂಬ ಶಿವ-ಪಾರ್ವತಿ ಪಿತೃತ್ವಪ್ರಜ್ಞೆ ಬೆಳೆಯುತ್ತದೆ. ‘‘ಲೋಕವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ’’ ಎಂಬ ವಿಶಾಲಭಾವ ಬಲಿಯುತ್ತದೆ. ಆಗ ಪೂರ್ವಾಶ್ರಮ ನಿರಸನವಾಗಿ ವ್ಯಕ್ತಿಯು ಕುಟುಂಬ ಸದಸ್ಯತ್ವದಿಂದ ವಿಶ್ವಕುಟುಂಬ ಸದಸ್ಯತ್ವಕ್ಕೆ ಹಿಗ್ಗಿಕೊಳ್ಳುತ್ತಾನೆ. ಆಗ ತನ್ನ ಕುಟುಂಬದ ವ್ಯಕ್ತಿಗುಂಟಾಗುವ ಸುಖದುಃಖಗಳಿಗೆ ಮಾತ್ರ ಸ್ಪಂದಿಸುವ ಬದಲು, ಲೋಕದ ಯಾವುದೇ ವ್ಯಕ್ತಿಯ ಸುಖದುಃಖಗಳಿಗೆ ಸ್ಪಂದಿಸುವ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಹೀಗೆ ‘‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’’ ಶರಣಬಂಧುತ್ವ ಮಹಾಸಿದ್ಧಿಗೆ ಅಡ್ಡಿಯಾಗಿರುವ ‘‘ಜನನಜಂಭ’’ವನ್ನು ಮೂಲೋತ್ಪಾಟನೆ ಮಾಡುವುದೇ ಈ ವಚನದ ಉದ್ದೇಶವಾಗಿದೆ.

ಇನ್ನು ವಚನದ ವಿಶ್ಲೇಷಣೆ: ಹಿಂದೂ ಸಾಮಾಜಿಕ ವ್ಯವಸ್ಥೆಯ ಚಾತುರ್ವರ್ಣ ಪದ್ಧತಿಯಲ್ಲಿ ಶೂದ್ರನದು ತೀರ ಕೆಳಗಿನದಾದ ನಾಲ್ಕನೆಯ ಸ್ತರ. ಇಲ್ಲಿ ಸಂಗಮಾಡಿದವರು ಆ ಶೂದ್ರರೂ ಅಲ್ಲ; ಅವರ ದಾಸರೂ ಅಲ್ಲ; ಆ ದಾಸರ ಮಕ್ಕಳು-ಎಂದು ಹೇಳುವಲ್ಲಿ ‘ಜನನ’ದ ಕೀಳ್ತನವನ್ನು ಇಲ್ಲ್ಲಿ ಇನ್ನೂ ಕೆಳಗಿನ ಸ್ತರಕ್ಕೆ ಇಳಿಸಲಾಗಿದೆ. ಈ ದಾಸರ ಮಕ್ಕಳಾದರೂ ವಿಧ್ಯುಕ್ತವಾಗಿ ಮದುವೆಯಾದವರಲ್ಲ. ಅದೂ ಹೋಗಲಿ, ಗೌರವದಿಂದ ಸಂಗಿಸಿದವರಲ್ಲ; ಬೆರಣಿ ಆಯ್ಕೆಯಂತಹ ಕ್ಷುಲ್ಲಕ ಕೆಲಸಕ್ಕೆ ಹೋಗಿ,‘‘ಅನಾಗರಿಕವಾಗಿ’’ ಬಯಲಲ್ಲಿ ಕೂಡಿದವರು, ಎಂದು ಮುಂತಾಗಿ ಹೇಳುವಲ್ಲಿ ಈ ಸ್ತರ ಇನ್ನೂ ಕೆಳಗಿಳಿದು, ‘ಜನನ’ದ ಬಗೆಗೆ ಬಸವಣ್ಣನವರು ತಳೆದಿದ್ದ ತೀಕ್ಣ ನಿರ್ಲಕ್ಷಭಾವ ಮತ್ತೂ ಸ್ಪಷ್ಟವಾಗುತ್ತದೆ. ಈ ‘ಸಂಗ’ವನ್ನು ಸಂಗಮನಾಥ ಸಾಕ್ಷಿಯಾಗಿ ಸಾರುವಲ್ಲಿ, ತಮ್ಮ ಧೋರಣೆಯನ್ನು ದೈವಸಾಕ್ಷಿಯಿಂದ ಇನ್ನೂ ದೃಢೀಕರಿಸುತ್ತಾರೆ. ‘‘ದೇವರಿಗೆ ನನ್ನ ಮೇಲೆ ಅಂತಃಕರುಣವಿದ್ದರೆ, ನನ್ನನ್ನು ಮುಂದಿನ ಜನ್ಮದಲ್ಲಿ ಹೊಲೆಯನನ್ನಾಗಿ ಹುಟ್ಟಿಸಲಿ’’ ಎಂಬ ಗಾಂಧೀಜಿಯವರ ಮಾತಿನಲ್ಲಿಯೂ ಈ ಭಾವ ಪರ್ಯಾಯವಾಗಿ ಮಿಂಚುತ್ತದೆ. ಹೀಗೆ ಈ ವಚನದಲ್ಲಿ ‘ದಾಸ-ದಾಸಿಯರ ಮಗ’ನೆಂಬ ಮಾತಿನ ಕಿಡಿಯ ಮೂಲಕ, ‘ಜನನಮದ’ವನ್ನು ಸುಟ್ಟು ಹಾಕುತ್ತಾರೆ, ಬಸವಣ್ಣನವರು.

Writer - ಡಾ. ಎಂ. ಎಂ. ಕಲಬುರ್ಗಿ

contributor

Editor - ಡಾ. ಎಂ. ಎಂ. ಕಲಬುರ್ಗಿ

contributor

Similar News