ತೆಂಗಿನ ಹಾಲಿನ ಆರೋಗ್ಯಲಾಭಗಳು ಗೊತ್ತೇ?

Update: 2019-11-28 15:26 GMT

ಚೆನ್ನಾಗಿ ಬೆಳೆದ ತೆಂಗಿನ ಕಾಯಿಯ ತುರಿಯನ್ನು ಹಿಂಡಿ ಹಾಲು ತೆಗೆಯಲಾಗುತ್ತದೆ. ಇದು ವಿವಿಧ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಹೇರಳವಾಗಿ ಹೊಂದಿದ್ದು,ಲ್ಯಾಕ್ಟೋಸ್ ಅಥವಾ ಡೇರಿ ಉತ್ಪನ್ನಗಳಿಗೆ ಅಸಹಿಷ್ಣುತೆಯನು ್ನ ಹೊಂದಿದವರಿಗೆ ಹೇಳಿ ಮಾಡಿಸಿದಂತಿದೆ. ತೆಂಗಿನ ಹಾಲಿನ ಆರೋಗ್ಯಲಾಭಗಳು ಇಲ್ಲಿವೆ...

► ತೂಕ ಇಳಿಸಲು ನೆರವಾಗುತ್ತದೆ

ತೆಂಗಿನ ಹಾಲು ಮಧ್ಯಮ ಸರಣಿಯ ಟ್ರೈಗ್ಲಿಸರೈಡ್‌ಗಳನ್ನು ಒಳಗೊಂಡಿರುವುದರಿಂದ ಶರೀರದ ತೂಕವನ್ನು ಇಳಿಸಲು ನೆರವಾಗುತ್ತದೆ. ಇತರ ಕೊಬ್ಬುಗಳಿಗೆ ಹೋಲಿಸಿದರೆ ಈ ಗ್ಲಿಸರೈಡ್‌ಗಳು ತೂಕವನ್ನು ಇಳಿಸಲು ಮತ್ತು ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಲು ಪೂರಕವಾಗಿವೆ.

► ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ತೆಂಗಿನ ಹಾಲಿನಲ್ಲಿರುವ ಲಾರಿಕ್ ಆಮ್ಲವು ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಸೂಕ್ಷ್ಮಜೀವಿ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳಿಂದಾಗಿ ಅದು ಬ್ಯಾಕ್ಟೀರಿಯಾಗಳು ವೃದ್ಧಿಗೊಳ್ಳುವುದನ್ನು ತಡೆಯುತ್ತದೆ ಮತ್ತು ಶರೀರವನ್ನು ವಿವಿಧ ಬ್ಯಾಕ್ಟೀರಿಯಾ ಸೋಂಕುಗಳಿಂದ ರಕ್ಷಿಸುತ್ತದೆ.

► ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಲಾರಿಕ್ ಆಮ್ಲವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ತೆಂಗಿನ ಗಂಜಿಯ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಿ ಒಳ್ಳೆಯ ಕೊಲಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

► ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ತೆಂಗಿನ ಹಾಲು ಪೊಟ್ಯಾಷಿಯಂ, ಸೋಡಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಗಳನ್ನು ಒಳಗೊಂಡಿರುವದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುವ ಅದು ರಕ್ತನಾಳಗಳ ಸಂಕುಚನವನ್ನು ತಡೆಯುತ್ತದೆ ಮತ್ತು ಅವುಗಳಲ್ಲಿ ತಡೆಗಳು ನಿರ್ಮಾಣಗೊಳ್ಳದಂತೆ ನೋಡಿಕೊಳ್ಳುತ್ತದೆ.

► ಮಧುಮೇಹವನ್ನು ನಿಯಂತ್ರಿಸುತ್ತದೆ

ತೆಂಗಿನ ಹಾಲಿನಲ್ಲಿಯ ಮಧ್ಯಮ ಸರಣಿಯ ಫ್ಯಾಟಿ ಆ್ಯಸಿಡ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸಲು ನೆರವಾಗುತ್ತವೆ. ನಿಯಮಿತವಾಗಿ ಈ ಹಾಲನ್ನು ಸೇವಿಸುತ್ತಿದ್ದರೆ ಮಧುಮೇಹಕ್ಕೆ ಗುರಿಯಗುವ ಅಪಾಯದಿಂದ ದೂರವಿರಬಹುದು.

► ಉರಿಯೂತವನ್ನು ತಡೆಯುತ್ತದೆ

ತೆಂಗಿನ ಹಾಲಿನಲ್ಲಿರುವ ಲಾರಿಕ್ ಆಮ್ಲದ ಉರಿಯೂತ ನಿರೋಧಕ ಗುಣವು ಸಂಧಿವಾತ,ಸ್ನಾಯು ನೋವು ಮತ್ತು ಇತರ ನೋವುಗಳೊಂದಿಗೆ ಗುರುತಿಸಿಕೊಂಡಿರುವ ಉರಿಯೂತವನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.

► ಜೀರ್ಣಕ್ರಿಯೆಗೆ ನೆರವಾಗುತ್ತದೆ.

ತೆಂಗಿನ ಹಾಲಿನ ಸೇವನೆಯಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ಹೀಗಾಗಿ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರು ಈ   ಹಾಲನ್ನು ಸೇವಿಸಬಹುದು. ತೆಂಗಿನ ಹಾಲು ಕರುಳಿನಲ್ಲಿಯ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಕರುಳಿನ ಆರೋಗ್ಯವನ್ನ ಹೆಚ್ಚಿಸುತ್ತದೆ

► ತೆಂಗಿನ ಹಾಲು ಸೇವನೆಯ ಅಡ್ಡಪರಿಣಾಮಗಳು

ತೆಂಗಿನ ಕಾಯಿಗೆ ಅಲರ್ಜಿ ಹೊಂದಿರುವವರು ತೆಂಗಿನ ಹಾಲನ್ನು ಸೇವಿಸಿದರೆ ಪ್ರತಿಕೂಲ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ಹಾಲು ಅಧಿಕ ಕ್ಯಾಲೊರಿಗಳು ಮತ್ತು ಕೊಬ್ಬುಗಳನ್ನು ಹೊಂದಿರುವುದರಿಂದ ಅತಿಯಾಗಿ ಸೇವಿಸಿದರೆ ದೇಹತೂಕ ಹೆಚ್ಚಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News