ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯದ ಕೊಡುಗೆ ಅಪಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ

Update: 2019-11-28 16:42 GMT

ಬೆಂಗಳೂರು, ನ.28: ವಿವಿಧ ಆಯಾಮಗಳಲ್ಲಿ ಹೊಸತನ ನೀಡುವ ಮೂಲಕ ಜೈನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

ಗುರುವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಶ್ರವಣಬೆಳಗೊಳ ಶ್ರೀ ಕ್ಷೇತ್ರ ಸ್ಥಾಪಿಸಿರುವ ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೈನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲನ್ನೇ ಸ್ಥಾಪಿಸಿದೆ. ಅದರಿಂದ ಅಪಾರವಾದ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಸಿಕ್ಕಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜೈನರ ಚರಿತ್ರೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನಗಳು ನಡೆಯಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಕಸಾಪ ಈ ದತ್ತಿ ಪ್ರಶಸ್ತಿ ನೀಡುವ ಮೂಲಕ ಇತಿಹಾಸ ನಿರ್ಮಿಸಿದೆ. ಸಾಹಿತ್ಯದ ಹಲವು ಆಯಾಮಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಪ್ರೊ.ಜೀವಂಧರ ಕುಮಾರಗೆ ನೀಡುವ ಮೂಲಕ ಪ್ರಶಸ್ತಿ ಮೌಲ್ಯ ಹೆಚ್ಚಾಗಿದೆ. ಸಾಹಿತ್ಯದ ಮೂಲಕ ಕಂಡುಕೊಳ್ಳುವ ಜೀವನ ವಿಶೇಷವಾಗಿರುತ್ತದೆ ಎಂದು ನುಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಜೀವಂಧರಕುಮಾರ ಕೆ. ಹೋತಪೇಟೆ, ಚಾವುಂಡರಾಯರ ಬಗ್ಗೆ ಕೃತಿ ರಚಿಸಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಪ್ರೋತ್ಸಾಹ ಅಪಾರವಾದುದು. ಅದರಿಂದಲೇ ಹಲವು ಜೈನ ಧರ್ಮದ ಕುರಿತು ಕೃತಿ ರಚಿಸಲಾಗಿದೆ. ಈ ಕೃತಿ ಇಟ್ಟುಕೊಂಡು ನಾಗಾಭರಣ ಚಿತ್ರ ನಿರ್ಮಿಸಿದರೆ, ಜೈನರ ಕುರಿತು ಜನರಿಗೆ ಮತ್ತಷ್ಟು ಮಾಹಿತಿ ತಲುಪಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜೀವಂದ್ರ ಕುಮಾರ್, ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಡಾ. ರಾಜಶೇಖರ ಹತಗುಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News