×
Ad

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನ್ಯಾಸಕರ ಧರಣಿ

Update: 2019-11-28 22:19 IST

ಮಂಡ್ಯ, ನ.28: ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿದರು.

ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಹದಿಹರೆಯದ ಮಕ್ಕಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಾತ್ಮಕ ಬದಲಾವಣೆ ತರುವ ರೂವಾರಿಗಳಾಗಿರುವ ಉಪನ್ಯಾಸಕರು ಹಲವು ಹೋರಾಟ ನಡೆಸಿದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಉಪನ್ಯಾಸಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಪದವಿಪೂರ್ವ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕು ಎಂದು ಅವರು ತಾಕೀತು ಮಾಡಿದರು.

ವೇತನ ತಾರತಮ್ಯ ಸಂಬಂಧ ಸರಕಾರದ ಲಿಖಿತ ಭರವಸೆಯಂತೆ 2ನೇ ಹೆಚ್ಚುವರಿ ಭಡ್ತಿಯನ್ನು ಮಂಜೂರು ಮಾಡಬೇಕು. ಕಾರ್ಯಭಾರ ಕುರಿತಂತೆ ಉನ್ನತಮಟ್ಟದ ಪರಿಷತ್ ಸಮಿತಿ ರಚಿಸಬೇಕು. ಅಲ್ಲಿವರೆಗೆ ವಾರದಲ್ಲಿ 16 ಗಂಟೆ ಬೋಧನಾ ಅವಧಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ನೆಟ್, ಸ್ಲೆಟ್, ಪಿಎಚ್‍ಡಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಭಡ್ತಿ ನೀಡಬೇಕು. ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಉಪನ್ಯಾಸಕರಿಗೆ ಬಿ.ಇಡಿ, ಪದವಿಯಿಂದ ವಿನಾಯಿತಿ ನೀಡಬೇಕು.

ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 80 ರಿಂದ 40ಕ್ಕೆ ನಿಗದಿಪಡಿಸಬೇಕು. ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಪದೋನ್ನತಿ ನೀಡಬೇಕು. ಹಳೆಯ ಪಿಂಚಣಿ ಯೋಜನೆ ವ್ಮರುಜಾರಿ ಮಾಡಬೇಕು. ಸರಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಧರಣಿಗೆ ಬೆಂಬಲ ನೀಡಿದರು. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಹನುಮಂತಯ್ಯ, ಕಾರ್ಯಾಧ್ಯಕ್ಷ ಜಿ.ಎನ್.ನಾಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಮಂಜೇಶ್‍ಕುಮಾರ್, ಕೆ.ಶಿವಲಿಂಗಯ್ಯ, ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News