ಅನರ್ಹರನ್ನು ಮತ್ತೊಮ್ಮೆ ಗೆಲ್ಲಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಮಾವಳ್ಳಿ ಶಂಕರ್

Update: 2019-11-28 17:06 GMT
ಫೈಲ್ ಚಿತ್ರ

ಬೆಂಗಳೂರು, ನ.28: ರಾಜ್ಯದ 15 ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರ, ಹಣ, ಜಾತಿಬಲ ದುರ್ಬಳಕೆ ಮಾಡಿಕೊಂಡು ಗೆಲವು ಸಾಧಿಸಬಹುದೆಂಬ ಹವಣಿಕೆಯಲ್ಲಿರುವುದು ಸ್ಪಷ್ಟ. ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಂಚಿತ್ತೂ ನಂಬಿಕೆ, ಗೌರವಗಳಿಲ್ಲದ ಬಿಜೆಪಿ ಕೈಯಲ್ಲಿ ರಾಷ್ಟ್ರದ ಆಳ್ವಿಕೆ ಸಿಲುಕಿಕೊಂಡಿದೆ. ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ಸಮ್ಮಿಶ್ರ ಸರಕಾರವನ್ನು ಅತಂತ್ರಗೊಳಿಸಿದ್ದು, 17 ಶಾಸಕರು ರಾಜೀನಾಮೆ ನೀಡಿದ್ದರು. ಪ್ರಸ್ತುತ ಅನರ್ಹರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಇವರನ್ನು ಮತ್ತೊಮ್ಮೆ ಗೆಲ್ಲಿಸಿದರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಂತಾಗುತ್ತದೆ. ಆದ್ದರಿಂದ ಇವರಿಗೆ ಮತ ನೀಡಬಾರದು ಎಂದು ತಿಳಿಸಿದರು.

ರಾಜ್ಯದಲ್ಲಿ ವಾಮಮಾರ್ಗದ ಮೂಲಕ ಅಧಿಕಾರದ ರುಚಿ ಅನುಭವಿಸುತ್ತಿರುವ ಬಿಜೆಪಿ, ಇತರೆ ರಾಜ್ಯಗಳಲ್ಲೂ ಶಾಸಕರನ್ನು ಅಕ್ರಮವಾಗಿ ತನ್ನತ್ತ ಸೆಳೆಯುವಲ್ಲಿ ನಿರತವಾಗಿದೆ. ಈ ಮೂಲಕ ದೇಶದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನೇ ಜಾತಿ ಪ್ರಭುತ್ವವಾಗಿ ಪರಿವರ್ತಿಸುತ್ತದೆ. ಬಿಜೆಪಿಯ ಈ ರಾಜಕೀಯ ಮದದ ಅಟ್ಟಹಾಸಕ್ಕೆ ಪ್ರಜ್ಞಾವಂತ ಮತದಾರರು ಸೂಕ್ತ ಉತ್ತರ ನೀಡಬೇಕಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News