ಹುಳಿಮಾವು ಕೆರೆ ಕೋಡಿ ದುರಂತ: 'ಅಪಾರ್ಟ್‌ಮೆಂಟ್ ಮಾಲಕರಿಗೆ ಪರಿಹಾರ'ದ ಬಗ್ಗೆ ಬಿಬಿಎಂಪಿ ಆಯುಕ್ತರ ಸ್ಪಷ್ಟನೆ

Update: 2019-11-28 18:02 GMT

ಬೆಂಗಳೂರು, ನ 28: ಹುಳಿಮಾವು ಕೆರೆಯ ದುರಂತದಿಂದ ನೀರು ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರು, ಸ್ಕೂಟರ್ ವಾಹನಗಳಿಗೆ ಹಾನಿ ಉಂಟಾಗಿದೆ. ಕೆಲ ವಾಹನಗಳು ಕೈಕೊಟ್ಟಿದ್ದು ಅವುಗಳ ರಿಪೇರಿಗಾಗಿ ಸಾವಿರಾರು ರೂ. ಖರ್ಚಾಗುತ್ತಿದೆ. ಆದ್ದರಿಂದ ವಾಹನವನ್ನು ರಿಪೇರಿ ಮಾಡಿಸಿ, ವಿಮೆ ಮೂಲಕ ಪರಿಹಾರವನ್ನು ತುಂಬಿಕೊಳ್ಳಬಹುದು. ಹಾಗಾಗಿ ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಪಾಲಿಕೆ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಳಿಮಾವು ಕೆರೆ ಕೊಡಿ ಒಡೆದು ಹಾನಿಗೊಳಗಾದ ಮನೆ ಮಾಲಕರಿಗೆ 50 ಸಾವಿರ ರೂ. ನೆರವು ನೀಡುವಂತೆ ಸರಕಾರ ಪ್ರಕಟಿಸುತ್ತಿದ್ದಂತೆ ತಮಗೂ ಪರಿಹಾರ ನೀಡುವಂತೆ ಅಪಾರ್ಟ್‌ಮೆಂಟ್ ಮಾಲಕರು ಬಿಬಿಎಂಪಿಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಅವರಿಗೆ ಪರಿಹಾರ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಬಿಬಿಎಂಪಿಗೆ ಇಂತಹ ಬೇಡಿಕೆಯ ಅರ್ಜಿಗಳು ಬಂದರೆ ಅವುಗಳನ್ನು ಕೂಡಲೇ ತಿರಸ್ಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹುಳಿಮಾವು ಕೆರೆ ಕೊಡಿ ಒಡೆದು 640 ಮನೆಗಳಿಗೆ ಹಾನಿ ಉಂಟಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಕೂಡ ಸ್ಥಳ ಪರಿಶೀಲನೆ ನಡೆಸಿ, ಬಿಬಿಎಂಪಿ 10 ಸಾವಿರ ಮತ್ತು ರಾಜ್ಯ ಸರಕಾರ 40 ಸಾವಿರ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಹಾನಿಗೊಳಗಾದ ಮನೆ ಮಾಲಕರಿಗೆ ಪರಿಹಾರವನ್ನು ನೀಡುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ಹುಳಿಮಾವು ಕೆರೆಯ ದುರಂತದಿಂದ 29 ಕೋಟಿ ರೂ. ನಷ್ಟ ಉಂಟಾಗಿದೆ. ಈಗಾಗಲೇ 156 ಮನೆಗಳಿಗೆ 50 ಲಕ್ಷ ರೂ. ನೀಡಲಾಗಿದೆ. ಉಳಿದ ಮನೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News