​ರಾಷ್ಟ್ರಲಾಂಛನ ದುರ್ಬಳಕೆಗೆ ಕಾದಿದೆ ಜೈಲುಶಿಕ್ಷೆ, ಭಾರೀ ದಂಡ

Update: 2019-11-29 03:51 GMT

ಹೊಸದಿಲ್ಲಿ, ನ.29: ವಾಣಿಜ್ಯ ಲಾಭಕ್ಕಾಗಿ ರಾಷ್ಟ್ರ ಲಾಂಛನವನ್ನು ಕಾನೂನುಬಾಹಿರವಾಗಿ ಮತ್ತು ಅಸಮರ್ಪಕವಾಗಿ ಬಳಸಿಕೊಳ್ಳುವುದನ್ನು ತಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಅಪರಾಧಕ್ಕಾಗಿ ಇರುವ ದಂಡವನ್ನು 500 ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.

ಪದೇ ಪದೇ ಈ ಅಪರಾಧ ಎಸಗಿದಲ್ಲಿ ಜೈಲು ಶಿಕ್ಷೆ ವಿಧಿಸುವುದು ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ.

ಲಾಂಛನಗಳು ಮತ್ತು ಹೆಸರುಗಳ (ಅಸಮರ್ಪಕ ಬಳಕೆ ತಡೆ) ಕಾಯ್ದೆ-1950ರ ಅನ್ವಯ ರಾಷ್ಟ್ರಧ್ವಜ, ಸರ್ಕಾರಿ ಇಲಾಖೆಗಳು ಬಳಸುವ ಕೋಟ್-ಆಫ್-ಆರ್ಮ್ಸ್, ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಧಿಕೃತ ಮುದ್ರೆ, ಮಹಾತ್ಮ ಗಾಂಧೀಜಿಯವರ ಚಿತ್ರ, ಪ್ರಧಾನಿ ಹಾಗೂ ಅಶೋಕಚಕ್ರ ಚಿತ್ರಗಳ ಬಳಕೆಯನ್ನು ನಿರ್ಬಂಧಿಸಿದೆ. ಆದರೆ ಅದು ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯ ತಿದ್ದುಪಡಿ ಕುರಿತ ಶಿಫಾರಸುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಡಿಸೆಂಬರ್ 20ರ ಒಳಗಾಗಿ ಸಾರ್ವಜನಿಕರು ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ.

ಕಾಯ್ದೆಯ ಸೆಕ್ಷನ್ 3ರ ಅನ್ವಯ, ಯಾವುದೇ ಸರ್ಕಾರಿ ಟ್ರೇಡ್‌ಮಾರ್ಕ್, ವಿನ್ಯಾಸ, ಹೆಸರು, ಲಾಂಛನ, ಅಧಿಕೃತ ಮುದ್ರೆ ಅಥವಾ ಪ್ರಾತಿನಿಧಿಕ ಚಿತ್ರಗಳನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ ಬಳಸುವಂತಿಲ್ಲ. ಈ ಕಾನೂನು ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಅನ್ವಯಿಸುತ್ತದೆ. ಆದರೆ ಈ ಕಾನೂನು ಪರಿಣಾಮಕಾರಿಯಲ್ಲ ಎಂಬ ಕಾರಣಕ್ಕೆ ದಂಡಶುಲ್ಕ ಮತ್ತು ಶಿಕ್ಷೆಯನ್ನು ಹೆಚ್ಚಿಸುವ ಪ್ರಸ್ತಾವ ಮುಂದಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News