ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 16ನೇ ಘಟಿಕೋತ್ಸವ: 220 ಮಂದಿಗೆ ಪದವಿ ಪ್ರದಾನ

Update: 2019-11-29 05:17 GMT

ಅಜ್ಮಾನ್, ನ.29: ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 16ನೇ ಘಟಿಕೋತ್ಸವವು ಅಲ್ ಜುರ್ಫ್ ನ ಎಮಿರೇಟ್ಸ್ ಹಾಸ್ಪಿಟಾಲಿಟಿ ಸೆಂಟರ್‌ನಲ್ಲಿ ನ.27ರಂದು ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಜ್ಮಾನ್ ದೊರೆ ಹಾಗೂ ಸಂಯುಕ್ತ ಅರಬ್ ಸಂಸ್ಥಾನದ ಸುಪ್ರೀಂ ಕೌನ್ಸಿಲ್ ಸದಸ್ಯ ಶೇಖ್ ಹುಮೈದ್ ಬಿನ್ ರಶೀದ್ ಅಲ್ ನುವೈಮಿ ಅವರು ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ 220 ಪದವೀಧರರಿಗೆ ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರಲ್ಲದೆ ಎಲ್ಲರಿಗೂ ಉಜ್ವಲ ಭವಿಷ್ಯ ಕೋರಿ ಶುಭ ಹಾರೈಸಿದರು.

ಅಜ್ಮಾನ್ ರಾಜಕುಮಾರ್ ಶೇಖ್ ಅಮ್ಮರ್ ಬಿನ್ ಹುಮೈದ್ ಅಲ್ ನುವೈಮಿ ಹಾಗೂ ಇತರ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಘಟಿಕೋತ್ಸವ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಇದೀಗ ತನ್ನ 22ನೇ ವರ್ಷದಲ್ಲಿದ್ದು, ವಿವಿಧ ಖಾಸಗಿ ವಿವಿಗಳ ಪೈಕಿ ಪ್ರಮುಖ ಸ್ಥಾನ ಪಡೆದಿದೆ. ತಮ್ಮ ಸಂಸ್ಥೆಗಳು 80 ದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ತುಂಬೆ ವಿವಿ ಆಸ್ಪತ್ರೆ 175 ದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ ಎಂದರು.

ಯುನಿವರ್ಸಿಟಿಯ ಕುಲಪತಿ ಪ್ರೊ.ಹೊಸ್ಸಾಮ್ ಹಮ್ದಿ ಮಾತನಾಡಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧೀನದ ಕಾಲೇಜುಗಳ ಸಂಖ್ಯೆ ಆರಕ್ಕೇರಿದ್ದು, ಸಂಸ್ಥೆ  26 ವಿವಿಧ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಪದವಿ ಪಡೆದ 220 ಪದವೀಧರರ ಪೈಕಿ 67 ಮಂದಿಗೆ ಎಂಬಿಬಿಎಸ್ ಪದವಿ, 21 ಮಂದಿಗೆ ಬಿಪಿಟಿ ಒದವಿ, 33 ಮಂದಿಗೆ ಫಾರ್ಮಾ ಡಿ ಪದವಿ, 40 ಮಂದಿಗೆ ಡಿಎಂಡಿ, 28 ಮಂದಿಗೆ ಬಿಬಿಎಂಎಸ್, 5 ಮಂದಿಗೆ ಬಿಎಸ್ಸಿ, ಎಂಎಲ್‌ಎಸ್, 9 ಮಂದಿಗೆ ಬಿಎಸ್ಸಿ, ಎಂಐಎಸ್, 9 ಮಂದಿಗೆ ಬಿಎಚ್‌ಎಸ್-ಎಎಸ್‌ಟಿ ಹಾಗೂ ಇಬ್ಬರಿಗೆ ಬಿಎಸ್‌ಎನ್ ಪದವಿ ಪ್ರದಾನ ಮಾಡಲಾಯಿತು.

ಪದವಿ ಪಡೆದವರಲ್ಲಿ 15 ಮಂದಿ ಸಂಯುಕ್ತ ಅರಬ್ ಸಂಸ್ಥಾನದವರಾದರೆ, 21 ಮಂದಿ ಜಿಸಿಸಿ ಹಾಗೂ 32 ಮಂದಿ ಇತರ ಅಬರ್ ರಾಷ್ಟ್ರದವರಾಗಿದ್ದಾರೆ.

ಒಟ್ಟು 73 ಮಂದಿ ಏಷ್ಯನ್ನರು 57 ಮಂದಿ ಆಫ್ರಿಕನ್ನರು ಹಾಗೂ 22 ಮಂದಿ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಕೆನಡ, ಡೊಮನಿಕಾ, ಹಂಗೆರಿ, ನಾರ್ವೇ, ನೆದರ್ಲ್ಯಾಂಡ್ ಹಾಗೂ ರಶ್ಯದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News