ಅಂಗನವಾಡಿ ಕಾರ್ಯಕರ್ತೆಯರಿಂದ ಔಷಧಿ ಮಾರಾಟ: ಕೇಂದ್ರದ ನೂತನ ತಿದ್ದುಪಡಿ ಕಾಯ್ದೆ ವಿರೋಧಿಸಿ ಧರಣಿ

Update: 2019-11-29 17:57 GMT

ಬೆಂಗಳೂರು, ನ.29: ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಔಷಧಿ ಹಾಗೂ ಮಾತ್ರೆಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಸಂಧಾನದ 1945 ಅನುಸೂಚಿ 23ರ ತಿದ್ದುಪಡಿ ಶಿಫಾರಸನ್ನು ವಿರೋಧಿಸಿ ಕರ್ನಾಟಕ ಫಾರ್ಮಾಸಿಸ್ಟ್ ಅಸೋಸಿಯೇಷನ್ ಸದಸ್ಯರು ನಗರದ ಪುರಭವನದ ಮುಂಭಾಗ ಪ್ರತಿಭಟನೆ ನಡೆಸಿದರು. 

ಡ್ರಗ್ಸ್‌ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1945 ಅನುಸೂಚಿ 23, ಕೇಂದ್ರ ಸರಕಾರದ ತಿದ್ದುಪಡಿ ಶಿಫಾರಸ್ಸಿನಲ್ಲಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಔಷಧಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಜನಸಾಮಾನ್ಯರಿಗೆ ಮಾರಕವಾಗುವುದರ ಜೊತೆಗೆ ನಿಜವಾಗಿ ತರಬೇತಿ ಪಡೆದಿರುವ ಲಕ್ಷಾಂತರ ಫಾರ್ಮಾಸಿಸ್ಟ್‌ಗಳ ಉದ್ಯೋಗವನ್ನು ಕಸಿದುಕೊಳ್ಳಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅರುಣ್ ಪಟೇಲ್ ಆತಂಕ ವ್ಯಕ್ತಪಡಿಸಿದರು.

ಪ್ರೊ.ಮಹೇಂದ್ರ ಶೆಟ್ಟಿ ಮಾತನಾಡಿ, ಇದು ಹಳೆಯ ಕಾಲದ ನಿಯಮವಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತ್ರೆ, ಔಷಧಿಗಳನ್ನು ಹೇಗೆ ನೀಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಫಾರ್ಮಾಸಿಸ್ಟ್‌ಗಳು ಔಷಧಿಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಸೂಕ್ತ ಮಾಹಿತಿ ಅಧ್ಯಯನಶೀಲರಾಗಿರುತ್ತಾರೆ. ಒಬ್ಬ ಸರ್ಜನ್ ವೈದ್ಯ ಮಾಡುವ ಕೆಲಸವನ್ನು ನರ್ಸ್ ಮಾಡಿದರೆ ಹೇಗೆ ಪರಿಪೂರ್ಣವಾಗುವುದಿಲ್ಲವೋ, ಹಾಗೆಯೇ ಅಂಗನವಾಡಿ ಕಾರ್ಯಕರ್ತರು ಮಾತ್ರೆ ನೀಡುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು.

ಡಾ.ಶಾಂತಕುಮಾರ್ ಬಾಬು ಮಾತನಾಡಿ, ಯಾವುದೇ ಔಷಧಿ ಹಾಗೂ ಮಾತ್ರೆಯನ್ನು ರೋಗಿಗಳಿಗೆ ನೀಡಬೇಕಾದರೆ ನೋಂದಾಯಿತ ಫಾರ್ಮಾಸಿಸ್ಟ್ ಇರುವುದು ಅಗತ್ಯವಾಗಿದೆ. ಸರಕಾರ ನೂತನ ತಿದ್ದುಪಡಿ ಶಿಪಾರಸ್ಸನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News