×
Ad

ಸ್ವಾತಂತ್ರ ಉದ್ಯಾನವನದಲ್ಲಿ ಅನಾವರಣಗೊಂಡ ‘ಕರ್ನಾಟಕ ವೈಭವ’

Update: 2019-11-29 23:34 IST

ಬೆಂಗಳೂರು, ನ.29: ಕರ್ನಾಟಕದ ತುತ್ತತುದಿ ಬೀದರ್‌ನಿಂದ ಹಿಡಿದು ಕೋಲಾರದವರೆಗಿನ ಐತಿಹಾಸಿಕ ಸ್ಥಳಗಳು, ಭಿನ್ನ, ಭಿನ್ನ ಸಂಸ್ಕೃತಿ, ಆಹಾರ ಪದ್ಧತಿಗಳು, ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಇಡೀ ಕರ್ನಾಟಕ ವೈಭವವೇ ಅನಾವರಣಗೊಂಡಿದ್ದು, ಮಕ್ಕಳನ್ನು ಆಕರ್ಷಿಸುತ್ತಿದೆ.

ನಗರದ ಖಾಸಗಿ ಶಾಲೆಗಳ ಸಿರಿ ಸಂಭ್ರಮದ ಅಂಗವಾಗಿ ಆಯೋಜಿಸಿರುವ ‘ಕ್ಯಾಮ್ಸ್ ಕರ್ನಾಟಕ ವೈಭವ’ದಲ್ಲಿ, ಬೆಂಗಳೂರಿನ ಹಲವು ಶಾಲಾ ಮಕ್ಕಳು ವಿಭಿನ್ನವಾದ ವೇಷ-ಭೂಷಣಗಳನ್ನು ತೊಟ್ಟು, ಆಯಾ ಪ್ರದೇಶದ ಭಾಷೆಗಳಲ್ಲಿಯೇ ಜಿಲ್ಲೆಗಳ ಸೌಂದರ್ಯವನ್ನು ವರ್ಣಿಸುತ್ತಿದ್ದ ದೃಶ್ಯಗಳು ಮನಸೂರೆಗೊಳಿಸುತ್ತಿದ್ದವು.

ಬೆಂಗಳೂರಿನ ಖಾಸಗಿ ಶಾಲೆಗಳ 5 ರಿಂದ 8 ನೇ ತರಗತಿಗಳಲ್ಲಿ ಓದುತ್ತಿರುವ ಮಕ್ಕಳು ಅತ್ಯಂತ ಸಂತಸದಿಂದ ಬರಮಾಡಿಕೊಂಡು, ಅವರಿಗೆ ನೀಡಿರುವ ಜಿಲ್ಲೆಯ ಐತಿಹಾಸಿಕತೆಯನ್ನು ಸುಂದರವಾಗಿ ವಿವರಿಸುತ್ತಿದ್ದರು. ಅಲ್ಲದೆ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಲ್ಲಿನ ಖ್ಯಾತ ಅಡುಗೆಗಳನ್ನು ಉಣಬಡಿಸುತ್ತಿದ್ದ ದೃಶ್ಯಗಳು ಮಕ್ಕಳ ಮನಸ್ಸನ್ನು ತಲ್ಲಣಗೊಳಿಸುತ್ತಿದ್ದವು.

ಬೀದರ್, ಗುಲಬರ್ಗಾ, ಉತ್ತರ ಕನ್ನಡ, ಬೆಂಗಳೂರು, ಕೋಲಾರ, ರಾಮನಗರ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಮುಖ ನದಿಗಳು, ಅಲ್ಲಿನ ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ಬೆಟ್ಟಗಳು, ಪ್ರಮುಖ ವ್ಯಕ್ತಿಗಳು, ಸಾಹಿತಿಗಳು, ಸಾಧು ಸಂತರು ಹೀಗೆ ಎಲ್ಲವನ್ನೂ ಶಾಲಾ ಮಕ್ಕಳು ಬಿಡಿಸಿ ಹೇಳುತ್ತಿದ್ದರು.

ವೈಭವವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶಿಕ್ಷಕರು ಶಾಲೆಗಳಲ್ಲಿ ಪಠ್ಯವನ್ನಷ್ಟೇ ಬೋಧಿಸದೆ, ಮಕ್ಕಳಿಗೆ ಚೈತನ್ಯ ತುಂಬುವ ಕೆಲಸ ಮಾಡಬೇಕು. ಸ್ವಾತಂತ್ರ ಹೋರಾಟಗಾರರ ಬಗ್ಗೆ, ನಮ್ಮ ಇತಿಹಾಸ, ಪರಂಪರೆ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮಾಧ್ಯಮ ಯಾವುದು ಇರಬೇಕು ಎಂಬುದು ತೀರ್ಮಾನ ಮಾಡಬೇಕಿರುವುದು ಶಿಕ್ಷಣ ತಜ್ಞರೇ ಹೊರತು, ಮಕ್ಕಳು, ಪೋಷಕರಲ್ಲ ಎಂದ ಅವರು, ಮಾತೃಭಾಷೆಯಲ್ಲಿ ವಿಷಯ ತಿಳಿಸಿದರೆ ನೇರವಾಗಿ ತಲೆಗೆ ಹೋಗುತ್ತದೆ. ಬೇರೆ ಭಾಷೆಯಲ್ಲಿ ಹೇಳಿದರೆ ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ ಎಂದರು.

ಮನೆಯಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಾರೆ. ಅದರಿಂದ ನೇರವಾಗಿ ಮ್ಕಕಳಿಗೆ ಕನ್ನಡದಲ್ಲಿ ಪಾಠ ಮಾಡಿದರೆ ನೇರವಾಗಿ ಅರ್ಥವಾಗುತ್ತದೆ. ಅಲ್ಲದೇ, ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದ ಬಗ್ಗೆ ಉದಾಸೀನ ತೋರಬಾರದು. ಮಕ್ಕಳಿಗೆ ಹೇಳುವ ಪಾಠವನ್ನು ಕನ್ನಡದಲ್ಲಿಯೇ ಹೇಳಿ. ಪೋಷಕರು ಹಾಗೂ ಶಿಕ್ಷಕರು ಮನಸ್ಸು ಮಾಡಿದರೆ ಚೆನ್ನಾಗಿ ಕನ್ನಡ ಕಲಿಸಬಲ್ಲರು ಎಂದು ದೊರೆಸ್ವಾಮಿ ಹೇಳಿದರು.

ಸಮಿತಿ ರಚನೆ ಮಾಡಿ: ಟಿಪ್ಪು ಸುಲ್ತಾನ್‌ರ ಕುರಿತು ಪಠ್ಯಪುಸ್ತಕಗಳಲ್ಲಿ ಇರುವ ಮಾಹಿತಿ ತೆಗೆಯಬೇಕು ಎಂದು ಸರಕಾರ ವಾದಿಸುತ್ತಿದೆ. ಆದರೆ, ಸರಕಾರವೇ ಅದನ್ನು ಮಾಡುವುದು ಸರಿಯಲ್ಲ. ಅನುಭವಿ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಪಕ್ಷಾತೀತ ವ್ಯಕ್ತಿಗಳನ್ನು ಆರಿಸಬೇಕು ಎಂದು ಅವರು ಒತ್ತಾಯಿಸಿದರು.

ಕೋಟ್ಯಧಿಪತಿಗಳ ಆಯ್ಕೆ: ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಸರಿಯಾದ ಜಾಗೃತಿ ಇಲ್ಲದ ಪರಿಣಾಮ ಕೋಟ್ಯಾಧಿಪತಿಗಳೇ ಚುನಾಯಿತರಾಗುತ್ತಿದ್ದಾರೆ. ಹೀಗಾಗಿ, ಮಕ್ಕಳಿಗೆ, ಚುನಾವಣೆ, ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಅನರ್ಹರ ಬದಲಿಗೆ, ಅರ್ಹರನ್ನು ಆಯ್ಕೆ ಮಾಡುವ ಕಡೆಗೆ ಸಾಗಬೇಕಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಯಾಮ್ಸ್ ಕಾರ್ಯದರ್ಶಿ ಡಿ.ಶಶಿಕುಮಾರ್, ಕ್ವಿಡೋ ಸಂಸ್ಥೆ ಮುಖ್ಯಸ್ಥೆ ಮೃದಲಾ, ಲೀಡ್ ಶಾಲೆ ಮುಖ್ಯಸ್ಥ ಪ್ರಶಾಂತ್, ಪ್ಲೇ ಆಫ್ ಮುಖ್ಯಸ್ಥ ನಳಿನಮೂರ್ತಿ, ಸುಭಾಷ್ ಪಬ್ಲಿಷಿಂಗ್ ಮುಖ್ಯಸ್ಥ ರವಿ, ಕ್ಯಾಮ್ಸ್ ಸಂಘದ ಸದಸ್ಯೆ ರಂಗಲಕ್ಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News