ವಂಚಕ ಕಂಪನಿಗಳಿಗೆ ರಾಜ್ಯದ ಜನಪ್ರತಿನಿಧಿಗಳೇ ಶ್ರೀರಕ್ಷೆ: ರವಿ ಕೃಷ್ಣಾರೆಡ್ಡಿ

Update: 2019-11-30 16:29 GMT

ಬೆಂಗಳೂರು, ನ.30: ರಾಜ್ಯದ ಪ್ರಮುಖ ಪಕ್ಷದ ಜನಪ್ರತಿನಿಧಿಗಳು ವಂಚಕ ಕಂಪನಿಗಳಿಗೆ ಶ್ರೀರಕ್ಷೆಯಾಗಿ ನಿಂತಿದ್ದು, ಅದರಲ್ಲಿ ನೇರವಾಗಿ ಪಾಲುದಾರರಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ. 

ಶನಿವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಡಾ. ಅಬ್ದುಲ್ ಸುಭಾನ್ ಅವರ ಪರವಾಗಿ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ವಂಚಕ ಕಂಪನಿಗಳಿಗೆ ಶ್ರೀರಕ್ಷೆಯಾಗಿ ನಿಂತಿರುವುದರಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ನೂರಾರು ಕುಟುಂಬಗಳಲ್ಲಿ ಈ ಕಾರಣಕ್ಕಾಗಿ ಸಾವು-ನೋವಾಗಿದೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಕಾರ್ಯಗಳು ನಿಂತುಹೋಗಿವೆ, ಕುಟುಂಬಗಳು ಮುರಿದು ಬಿದ್ದಿವೆ. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ವಂಚಿತರ ಪರವಾಗಿ ನ್ಯಾಯಾಲಯಗಳಲ್ಲಿ ಮತ್ತು ಇತರೆಡೆಗಳಲ್ಲಿ ನಿರಂತರ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ನಮ್ಮ ಪ್ರಯತ್ನದ ಫಲವಾಗಿ ಸುಮಾರು 25ಕ್ಕೂ ಹೆಚ್ಚು ಅಕ್ರಮ ಕಂಪನಿಗಳು ಬಾಗಿಲು ಹಾಕುವಂತಾಗಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಹಾಗೂ ವಂಚಿತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ನಮ್ಮ ಪಕ್ಷದ ಅಭ್ಯರ್ಥಿ ಡಾ. ಅಬ್ದುಲ್ ಸುಭಾನ್ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಶಿವಾಜಿನಗರ ಅಭ್ಯರ್ಥಿ ಡಾ. ಅಬ್ದುಲ್ ಸುಭಾನ್ ಮಾತನಾಡಿ, ರಾಜ್ಯದ ನೆಲ, ಜಲ, ಭಾಷೆಯನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕಾಗಿದೆ, ಭ್ರಷ್ಟ ಅಧಿಕಾರಿಗಳಿಂದ ಮತ್ತು ರಾಜಕಾರಣಿಗಳಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಕೇವಲ ವೈಯಕ್ತಿಕ ಅಭಿವೃದ್ಧಿಗೆ, ಅಧಿಕಾರಕ್ಕಾಗಿ ಮತ್ತು ಜನರಿಗೆ ಮೋಸ ಮಾಡಲೆಂದೇ ರಾಜಕೀಯ ಮಾಡುತ್ತಿದ್ದಾರೆ. ಇಂಥವರಿಗೆ ಛೀಮಾರಿ ಹಾಕಿ, ಸ್ವಚ್ಛ- ಪ್ರಾಮಾಣಿಕ- ಜನಪರ ರಾಜಕಾರಣಕ್ಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ನಮ್ಮ ಪಕ್ಷಕ್ಕೆ ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News