ಕನ್ನಡದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ: ಹಿರಿಯ ಪತ್ರಕರ್ತ ರಂಜಾನ್ ದರ್ಗಾ

Update: 2019-11-30 17:21 GMT

ಬೆಂಗಳೂರು, ನ. 30: ‘ಕನ್ನಡದ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿಯಾಗಿದೆ. ಪಂಪನು ‘ಮನುಷ್ಯ ಜಾತಿ ತಾನೊಂದೆವಲಂ’ ಎಂದ ಇಡೀ ಮಾನವ ಕುಲ ಒಂದೇ ಇದೇ ಸತ್ಯ ಎಂಬುದನ್ನು ನಾವು ತಿಳಿಯಬೇಕು’ ಎಂದು ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಪ್ರತಿಪಾದಿಸಿದ್ದಾರೆ.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕೆಇಬಿ ಇಂಜಿನಿಯರುಗಳ ಸಂಘದಿಂದ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಮತ್ತು ಇಂದಿನ ಸಾಹಿತಿಗಳು, ಎಲ್ಲ ಶಾಸನಗಳ ಆಶಯ ಮಾನವ ಘನತೆ, ಪ್ರೀತಿ, ಸಹನೆ ಸಾರುವುದಾಗಿದೆ. ಕನ್ನಡದ ಸಹೋದರಿ ಭಾಷೆಗಳಾದ ಬಂಜಾರ, ಕೊಂಕಣಿ, ತುಳು, ಬ್ಯಾರಿಯಂತೆ ಪಾಕಿಸ್ತಾನದಲ್ಲೂ ಕನ್ನಡದ ಸಹೋದರಿ ಭಾಷೆ ಬ್ರಾಹ್ಮಿ ದ್ರಾವಿಡ ಭಾಷಾ ಪ್ರವರ್ಗವಿದೆ. ನಮ್ಮ ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಬಿಟ್ಟರೆ ಉಳಿದ ಭಾಷೆಗೆ ಲಿಪಿ ಇಲ್ಲ. ಆದರೆ ಬ್ರಾಹ್ಮಿ ಭಾಷೆಗೆ ಪಾಕಿಸ್ತಾನ ಲಿಪಿ ನೀಡಿರುವುದು ವಿಶೇಷ ಎಂದು ಅವರು ಉಲ್ಲೇಖಿಸಿದರು.

ಕನ್ನಡ ಭಾಷೆಯ ಮೂಲಕ ಅಮರತ್ವ ಸಾಧಿಸಿರುವ ಮಹನೀಯರು ಕಟ್ಟಿರುವ ಪರಂಪರೆ ವಿಶಿಷ್ಟವಾದುದು. ನಮ್ಮ ವಚನ ಚಳವಳಿ ಪರ್ಯಾಯ ಸಮಾಜವನ್ನೇ ಕಟ್ಟಿಕೊಟ್ಟಿದೆ. 2013ರಲ್ಲಿ ಲಂಡನ್ ಸ್ಪೀಕರ್ ಜಾನ್‌ಬಾರ್ಕೊ ಅವರು ಬಸವಣ್ಣನನ್ನು ಸಂಶೋಧಿಸಿ ವಿಶ್ವದ ದೊಡ್ಡ ರಾಜಕೀಯ ತತ್ವಜ್ಞಾನಿ ಎಂದು ಪರಿಗಣಿಸಿ ಅವರ ಪಾರ್ಲಿಮೆಂಟ್ ಮುಂದೆ ಅವರ ಪುತ್ಥಳಿ ನಿರ್ಮಿಸಿರುವುದು ಕನ್ನಡ ನಾಡಿನ ಹೆಗ್ಗಳಿಕೆ ಎಂದು ಸ್ಮರಿಸಿದರು.

ಪ್ರೊ. ಹಿ.ಚಿ. ಶಾಂತವೀರಯ್ಯ ಮಾತನಾಡಿ, ಇಂದು ನಾವೆಲ್ಲರೂ ‘ಆನೆ’ ಆಗಬೇಕು ಅಂದರೆ ‘ಆರೋಗ್ಯ’ ಮತ್ತು ‘ನೆಮ್ಮದಿ’ ಕಾಪಾಡಿಕೊಳ್ಳಬೇಕು. ವಿಶ್ವಕ್ಕೆ ‘ಶೂನ್ಯ’ ಕೊಟ್ಟ ಕನ್ನಡದ ಹೆಗ್ಗಳಿಕೆ ದೊಡ್ಡದು, ಇದರಿಂದ ಗಣಕೀರಣಕ್ಕೆ ಅನುಕೂಲವಾಯಿತು ಎಂದರು

ಮೂರು ಸಾವಿರ ಭಾಷೆಗಳಿಗೆ ಇಲ್ಲದ ‘ತಲೆ ಕಟ್ಟು’ ಕನ್ನಡದ ಸಾಧನೆ, ಇದನ್ನು ಕನ್ನಡ, ತೆಲುಗು ಬಳಸುತ್ತದೆ. ‘ಕುಂಡಿ’ ಬಳಕೆ, ಪುಣ್ಯಕೋಟಿಯ ಕಲ್ಪನೆ/ಛಂದಸ್ಸು ಕನ್ನಡದ ಸಾಧನೆ. ಕೆಇಬಿ ಎಂಜಿನಿಯರು ಬರೀ ಲಕ್ಷ್ಮಿಪುತ್ರರಾಗಿರದೆ ಸರಸ್ವತಿ ಪುತ್ರರೂ ಆಗಲಿ ಎಂದು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಅಬಕಾರಿ ಸಚಿವ ಎಚ್.ನಾಗೇಶ್ ಉದ್ಘಾಟಿಸಿದರು. ಈ ವೇಳೆ ಕೆಪಿಟಿಸಿಎಲ್ ನಿರ್ದೇಶಕ ಹಾಗೂ ಅಧ್ಯಕ್ಷ ಶಿವಕುಮಾರ್, ವ್ಯವಸ್ಥಾಪಕ ನಿರ್ದೇಶಕಿ ಭಾರತಿ, ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಸಂಘದ ಕಾರ್ಯದರ್ಶಿ ಡಾ.ಗೋವಿಂದಸ್ವಾಮಿ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News