×
Ad

ರಾಜಕಾರಣಿಗಳ ಪದಸಂಪತ್ತಿಗೆ ನೆರವಾಗುವ ಕೃತಿಯ ಅಗತ್ಯವಿದೆ: ಸಚಿವ ಸುರೇಶ್‌ ಕುಮಾರ್

Update: 2019-11-30 22:55 IST

ಬೆಂಗಳೂರು, ನ.30: ಉಪಚುನಾವಣೆಯ ಹಿನ್ನೆಲೆಯಲ್ಲಿ ನಮ್ಮ ಜನಪ್ರತಿನಿಧಿಗಳು ಬಳಸುತ್ತಿರುವ ಪದಗಳನ್ನು ಕೇಳಿದರೆ ಬೇಸರವಾಗುತ್ತಿದೆ. ಹೀಗಾಗಿ ಇವರ ಭಾಷಾ ಕಲಿಕೆಯನ್ನು ಉತ್ತಮ ಪಡಿಸುವಂತಹ ಕೃತಿಯೊಂದನ್ನು ಹೊರತರಬೇಕಾದ ಅಗತ್ಯವಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಶನಿವಾರ ಸಪ್ನ ಬುಕ್‌ಹೌಸ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 50 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜಕಾರಣಿಗಳು ಉಪಚುನಾವಣೆಯ ನೆಪದಲ್ಲಿ ಪರಸ್ಪರ ಟೀಕೆ ಮಾಡುವ ಸಂದಭರ್ದಲ್ಲಿ ಕೆಟ್ಟ ಪದವನ್ನು ಬಳಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಬದಲಾಗಬೇಕಾದರೆ ಉತ್ತಮ ಪುಸ್ತಕಗಳನ್ನು ಓದುವಂತಹ ಹವ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ ಎಂದರು.

ನಮ್ಮ ಪಕ್ಕದ ರಾಜ್ಯದ ಕೇರಳದಲ್ಲಿ ಭಿಕ್ಷುಕ ದಿನಪತ್ರಿಕೆಯನ್ನು ಖರೀದಿಸಿ ಓದುತ್ತಾನೆ. ಆದರೆ, ಕರ್ನಾಟಕದ ಜನತೆ ಪತ್ರಿಕೆಗಳನ್ನೇ ಭಿಕ್ಷೆ ಬೇಡುತ್ತಾರೆಂದು ಎಸ್.ಬಂಗಾರಪ್ಪರವರು ಲೇವಡಿ ಮಾಡಿದ್ದರು. ಇಂತಹ ಸಂದರ್ಭ ಈಗಲೂ ಇರುವಾಗ ಸಪ್ನ ಬುಕ್ ಹೌಸ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದೇ ಬಾರಿ ಕನ್ನಡದ ವಿವಿಧ ಕ್ಷೇತ್ರಗಳ ಬರಹಗಾರರಿಂದ 50 ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನೀಕರಣಕ್ಕೆ ಸಿಲುಕಿರುವ ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇನ್ನು ಪುಸ್ತಕ ಓದುವುದು ದೂರದ ಮಾತಾಗಿದೆ. ಇದರಿಂದಾಗಿ ಭಾಷಾ ಸಂಪತ್ತು ಕಡಿವೆುಯಾಗಿ ಸಂವಹನ ಕೌಶಲ್ಯ ಕುಂಠಿತವಾಗಿದೆ. ಇದು ಬದಲಾಗಬೇಕಾದ ಅಗತ್ಯತೆಯಿದೆ ಎಂದು ಅವರು ಹೇಳಿದರು.

ಹಿರಿಯ ಸಂಶೋಧಕಿ ಕಮಲಾ ಹಂಪನಾ ಮಾತನಾಡಿ, ಪುಸ್ತಕಗಳನ್ನು ಓದುವುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ನಮ್ಮ ಯುವ ತಲೆಮಾರಿಗೆ ಕಲಿಸಿಕೊಡಬೇಕಾಗಿದೆ. ಇಂತಹದ್ದೆ ಪುಸ್ತಕಗಳನ್ನು ಓದಬೇಕೆಂಬ ಆದ್ಯತೆಯಾಗಿಸಿಕೊಳ್ಳದೆ, ಕೈಗೆ ಸಿಕ್ಕಿದ್ದನ್ನು ಓದುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಯಾವುದು ವೌಲ್ಯಯುತವಾದ ಬರಹ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಓದುಗರ ತೀರ್ಥಯಾತ್ರೆಯು ಗ್ರಂಥಾಲಯ, ಪ್ರಕಾಶನ ಸಂಸ್ಥೆಗಳಾಗಿರಬೇಕೆಂದು ನಮ್ಮ ಹಿರಿಯ ಸಾಹಿತಿಗಳು ಸದಾ ಹೇಳುತ್ತಿದ್ದರು. ಓದುಗರ ಇಂತಹ ಪ್ರವೃತ್ತಿಗಳು ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತವೆ ಹಾಗೂ ಮೌಲ್ಯಯುತವಾದ ಪುಸ್ತಕಗಳು ಪ್ರಕಟಗೊಳ್ಳಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಡಾ.ಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದ ಮೂರ್ತಿ, ಡಾ.ಬೈರಮಂಗಲ ರಾಮೇಗೌಡ, ಎಸ್.ಎಸ್.ಅಂಗಡಿ, ಡಾ.ಸಿ.ಚಂದ್ರಪ್ಪ, ಡಾ.ಲತಾ ಗುತ್ತಿ, ಚಂದ್ರಕಾಂತ್ ಪೋಕಳೆ, ಎಚ್.ಡುಂಡಿರಾಜ್, ಬಿ.ಆರ್.ಲಕ್ಷ್ಮಣ್‌ರಾವ್ ಸೇರಿದಂತೆ 50ಮಂದಿ ಲೇಖಕರ ಪುಸ್ತಕಗಳನ್ನು ಪ್ರಕಟಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ಸಪ್ನಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ದೊಡ್ಡೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕನ್ನಡ ಭಾಷೆ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಕೋಟ್ಯಾಧಿಪತಿ ಕಾರ್ಯಕ್ರಮದ ಮಾದರಿಯಲ್ಲಿಯೇ ಪ್ರತಿಶಾಲೆಯಲ್ಲಿ ರಸಪ್ರಶ್ನೆ(ಕ್ವಿಝ್)ಯನ್ನು ಆಯೋಜಿಸಲಾಗುತ್ತಿದೆ. -ಸುರೇಶ್‌ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News