ನಿಸಾರ್ ಅಹಮದ್ ಕವಿತೆಗಳ ಆಮೂಲಾಗ್ರ ಚರ್ಚೆಯಾಗಬೇಕಿದೆ: ಸಿ.ಎನ್.ರಾಮಚಂದ್ರನ್

Update: 2019-11-30 17:28 GMT

ಬೆಂಗಳೂರು, ನ.30: ಕುಗ್ರಾಮದಲ್ಲಿರುವ ಜನರೂ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಬರೆದ ಕವಿತೆಗಳನ್ನು ಗುರುತಿಸುವಷ್ಟರ ಮಟ್ಟಿಗೆ ಪ್ರಚಲಿತಗೊಂಡಿವೆ ಎಂದು ವಿಮರ್ಶಕ ಸಿ.ಎನ್.ರಾಮಚಂದ್ರನ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಬಿಎನ್‌ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ ಐದು ಅನುವಾದಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮಲ್ಲಿ ಅನೇಕರು ಶ್ರೇಷ್ಠ ಕವಿಗಳಿದ್ದಾರೆ. ಆದರೆ, ಅವರ ನಡುವೆ ನಿಸಾರ್ ಅಹಮದ್ ಹೆಚ್ಚು ಪ್ರಚಲಿತಗೊಂಡಿದ್ದಾರೆ. ಹಳ್ಳಿಯಿಂದ ಹಿಡಿದು ನಗರದವರೆಗೂ ಅವರು ಖ್ಯಾತಿ ಗಳಿಸಿದ್ದಾರೆ. ಅನೇಕ ನೆಲೆಗಳಲ್ಲಿ ತಮ್ಮದೇ ಆದ ಪ್ರಭಾವ, ಪ್ರತಿಭೆ, ಸಾಧನೆಯನ್ನು ನಿಸಾರ್ ಗಳಿಸಿಕೊಂಡಿದ್ದಾರೆ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಪ್ರೊ.ನಿಸಾರ್ ಅಹಮದ್ ಅವರನ್ನು ಕೇಂದ್ರವನ್ನಾಗಿಸಿಕೊಂಡು ಅವರ ಕವಿತೆಗಳ ಆಮೂಲಾಗ್ರ ಚರ್ಚೆಗಳು ನಡೆಯಬೇಕಿದೆ. ಕನ್ನಡದ ಕವಿತೆಗಳು ಅನ್ಯ ಭಾಷೆಗಳ ಸಂವೇದನಾಶೀಲ ಅಂಶಗಳನ್ನು ಒಳಗೊಂಡಿವೆ. ನಿಸಾರ್‌ರ ಕವಿತೆಗಳು ಏಕಕಾಲಕ್ಕೆ ಹಿಂದಿ, ಉರ್ದು, ಇಂಗ್ಲಿಷ್, ತೆಲಗು ಸಾಹಿತ್ಯಕ್ಕೆ ಅನುವಾದಗೊಂಡಿರುವುದು ಅವರ ಸಾರ್ಥಕತೆ ತೋರಿಸಿಕೊಡುತ್ತದೆ. ಈ ತರನಾದ ಸನ್ಮಾನ ಬೇರೆ ಯಾವ ಸಾಹಿತಿ, ಕವಿಗೂ ಈವರೆಗೆ ದೊರೆತಿಲ್ಲ ಎಂದು ಅವರು ಬಣ್ಣಿಸಿದರು.

ತೆಲುಗು ಅನುವಾದಕ ಸ. ರಘುನಾಥ ಮಾತನಾಡಿ, ಕವಿ ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಬಂಡಾಯದ ಒಳನೋಟವಿದೆ. ಅಲ್ಲದೆ, ಅವರ ಕವಿತೆಗಳಲ್ಲಿ ಮುಸ್ಲಿಮ್ ಸಂವೇದನೆ ಅಡಕವಾಗಿದೆ. ಆದರೆ, ವಿಮರ್ಶಕರು ಇದನ್ನು ಅರಿಯದೇ ಕುರುಡರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯದಲ್ಲಿ ನವ್ಯ ಹಾಗೂ ನವೋದಯ ಕಾಲಘಟ್ಟದಲ್ಲಿ ಜಿದ್ದಾಜಿದ್ದಿ ನಡೆದಿತ್ತು. ಆ ಸಂದರ್ಭದಲ್ಲಿಯೂ ನಿಸಾರ್ ಅಹಮದ್ ಯಾವುದರಲ್ಲಿಯೂ ಗುರುತಿಸಿಕೊಳ್ಳದೇ ಎರಡನ್ನೂ ಒಳಗೊಂಡ ಕವಿತೆ ಕಟ್ಟಿದರು. ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ಈಗ ಅಂತಹ ಜಿದ್ದಾಜಿದ್ದಿ ಏರ್ಪಟ್ಟಿದೆ. ನಿಸಾರ್ ಕವಿತೆಗಳ ಸಾರವು ತೆಲುಗು ಸಾಹಿತಿಗಳಿಗೆ ಸಮನ್ವಯತೆಯ ಬೆಸುಗೆ ತಳೆಯಲಿದೆ ಎಂದು ಪ್ರತಿಪಾದಿಸಿದರು.

ಉರ್ದು ಕವಿ ಖಲೀಲ್ ಮಾಮೂನ್ ಮಾತನಾಡಿ, ಕಾವ್ಯ ಸಂಸ್ಕೃತಿ ಉದ್ಧಾರವಾಗಬೇಕು ಎಂದರೆ ಕವಿಗಳು ಉತ್ತಮವಾದ ಕವಿತೆ ರಚಿಸಬೇಕು, ಈಗಿನ ಕವಿಗಳು ತಾವು ಬರೆದ ಕವಿತೆಗಳನ್ನೇ ಉತ್ತಮ ಎಂದು ತಿಳಿದು ಅಹಂ ಬೆಳೆಸಿಕೊಂಡಿದ್ದಾರೆ. ಇನ್ನೂ ಕಲಿಯಬೇಕು ಎಂಬ ಧೋರಣೆ ಯುವ ಕವಿಗಳಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಆರ್.ಇಕ್ಬಾಲ್ ಅಹಮದ್, ಬಿಎನ್‌ಎಂ ಕಾಲೇಜಿನ ಕಾರ್ಯದರ್ಶಿ ನಾರಾಯಣ ಆರ್.ಮಾನೆ ಸೇರಿದಂತೆ ಮತ್ತಿತರರಿದ್ದರು. ಇದೇ ವೇಳೆ ತೆಲುಗು ಅನುವಾದ ಬಗ್ಗೆ ಸ.ರಘುನಾಥ, ಇಂಗ್ಲಿಷ್ ಅನುವಾದ ಬಗ್ಗೆ ಪ್ರೊ.ಎಂ.ಎಸ್.ರಘುನಾಥ್, ಉರ್ದು ಅನುವಾದ ಬಗ್ಗೆ ಡಾ.ಮಾಹೇರ್ ಮನ್ಸೂರ್, ಹಿಂದಿ ಅನುವಾದ ಬಗ್ಗೆ ಪ್ರೊ.ಬಿ.ವೈ.ಲಲಿತಾಂಬ, ಮಲೆಯಾಳಂ ಅನುವಾದ ಬಗ್ಗೆ ಡಾ.ಪಾರ್ವತಿ ಜಿ.ಐತಾಳ್ ಅನಿಸಿಕೆ ಹಂಚಿಕೊಂಡರು.

ನಿತ್ಯೋತ್ಸವ ಕವಿತೆ ರಚಿಸುವ ಮೂಲಕ ನಿಸಾರ್ ಅಹ್ಮದ್ ಅವರು ಬಂಕಿಮಚಂದ್ರ ಚಟರ್ಜಿ, ರವೀಂದ್ರ ನಾಥ್ ಟ್ಯಾಗೋರ್ ಹಾಗೂ ಡಾ.ಇಕ್ಬಾಲ್ ಅವರ ಸಾಲಿಗೆ ಸೇರಿದ್ದಾರೆ. ಈಗಿನ ತಲೆಮಾರಿನಲ್ಲಿ ನಿಸಾರ್ ಅವರು ಮಾತ್ರ ಈ ರೀತಿಯ ಗೀತೆ ರಚಿಸಿದ್ದಾರೆ.

-ಖಲೀಲ್ ಮಾಮೂನ್, ಉರ್ದು ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News