×
Ad

ಚೆನ್ನಣ್ಣ ವಾಲೀಕಾರ ಬಂಡಾಯ ಸಾಹಿತ್ಯದ ಬೆನ್ನೆಲುಬಾಗಿದ್ದರು: ಬಿ.ಟಿ. ಲಲಿತಾನಾಯಕ್

Update: 2019-11-30 23:08 IST

ಬೆಂಗಳೂರು, ನ.30: ಹಿರಿಯ ಕವಿ ಚೆನ್ನಣ್ಣ ವಾಲೀಕಾರ ಬಂಡಾಯ ಸಾಹಿತ್ಯದ ಬೆನ್ನೆಲುಬಾಗಿದ್ದರು. ಅವರ ಕವಿತೆಗಳನ್ನು ಓದುವ ಮೂಲಕ ನಾವು ಹೊಸ ಚಿಂತನೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದೆವು ಎಂದು ಹಿರಿಯ ಲೇಖಕಿ ಬಿ.ಟಿ.ಲಲಿತಾನಾಯಕ್ ಸ್ಮರಿಸಿದ್ದಾರೆ.

ಶನಿವಾರ ಬಂಡಾಯ ಸಾಹಿತ್ಯ ಸಂಘಟನೆ ನಗರದ ಕಸಾಪದಲ್ಲಿ ಆಯೋಜಿಸಿದ್ದ ಡಾ.ಚೆನ್ನಣ್ಣ ವಾಲೀಕಾರ: ನುಡಿ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲೀಕಾರರ ಕಾವ್ಯಗಳು ಇಂದಿಗೂ, ಎಂದಿಗೂ ಪ್ರೇರಣೆ ನೀಡುವಂತಹದ್ದೆಂದು ತಿಳಿಸಿದರು.

ರಾಯಚೂರು ಅಂದರೆ ಚೆನ್ನಣ್ಣ ವಾಲೀಕಾರ ಎಂಬುವಷ್ಟರ ಮಟ್ಟಿಗೆ ನಮ್ಮೆಲ್ಲರನ್ನು ಆವರಿಸಿಕೊಂಡಿದ್ದರು. ಚೆನ್ನಣ್ಣ ವಾಲೀಕಾರ ಜೊತೆಗೆ ಕಳೆದ ಪ್ರತಿ ನೆನಪು ಸ್ಮರಣೀಯವಾದದ್ದು. ಅವರು ಕಾವ್ಯಗಳನ್ನು ಕೇವಲ ಬರೆಯುತ್ತಿರಲಿಲ್ಲ. ಉಸಿರಾಡುತ್ತಿದ್ದರು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಹಿರಿಯ ಕವಿ ಚೆನ್ನಣ್ಣ ವಾಲೀಕಾರ ತಮ್ಮ ಕಾವ್ಯಗಳಲ್ಲಿ ಬಂಡಾಯದ ಜೊತೆಗೆ ದಲಿತ ಚಿಂತನೆಗಳನ್ನು ದಾಖಲಿಸದೆ ಮುಗಿಸುತ್ತಿರಲಿಲ್ಲ. ಅವರ ಪ್ರತಿಯೊಂದು ಬರಹ, ಚಿಂತನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಸುಹೊಕ್ಕಾಗಿದ್ದರು ಎಂದರು. ಅವರ ಬರಹಗಳ ಬಗ್ಗೆ ಹೆಚ್ಚಿನ ವಿಮರ್ಶೆ ನಡೆದಿಲ್ಲವೆಂಬುದು ಸತ್ಯ. ಆ ಕೊರಗು ವಾಲೀಕಾರರನ್ನು ಸದಾ ಕಾಡಿತ್ತು. ಆದರೂ ಅವರ ವೌಲಿಕವಾದ ಕಾವ್ಯಗಳು ಬಂಡಾಯ ಸಾಹಿತ್ಯಕ್ಕೆ ಸದಾ ಬೆನ್ನೆಲುಬಾಗಿರುತ್ತದೆ. ಈ ನಿಟ್ಟಿನಲ್ಲಿ ಅವರ ಕಾವ್ಯ, ಚಿಂತನೆಗಳನ್ನು ಮರು ಓದಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಕೆ.ಶರೀಫಾ ಮಾತನಾಡಿ, ಚೆನ್ನಣ್ಣ ವಾಲೀಕಾರರು ಬಂಡಾಯ ಸಾಹಿತ್ಯವನ್ನು ಮುನ್ನೆಲೆಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ವೈಯಕ್ತಿಕವಾಗಿ ಸರಳ ಜೀವಿಯಾಗಿದ್ದು, ಸದಾ ಹಸನ್ಮುಖಿಯಾಗಿರುತ್ತಿದ್ದರು. ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಕಾವ್ಯಗಳ ಮೂಲಕ ನಮ್ಮ ಜೊತೆಗಿರುತ್ತಾರೆಂದು ತಿಳಿಸಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ, ಬಸವರಾಜ ಸಬರದ, ಬರಗೂರು ರಾಮಚಂದ್ರಪ್ಪ, ಚಂದ್ರಪ್ಪ ಸೇರಿದಂತೆ ಹಲವು ಮಂದಿ ಚೆನ್ನಣ್ಣ ವಾಲೀಕಾರರ ಕುರಿತು ನೆನಪು ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News