ನರೇಗಾದಡಿ ಕೆಲಸ ಮಾಡಲು ಜನರ ನಿರುತ್ಸಾಹ !

Update: 2019-11-30 18:18 GMT

ಬೆಂಗಳೂರು, ನ.30: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ) ಅಡಿಯಲ್ಲಿ ಕೆಲಸ ಮಾಡಲು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜನರು ನಿರುತ್ಸಾಹ ತೋರಿದ್ದಾರೆ.

ಒಂದು ಕುಟುಂಬಕ್ಕೆ 100 ದಿನಗಳ ಕಾಲ ಉದ್ಯೋಗ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ 2006 ರಲ್ಲಿ ನರೇಗಾ ಯೋಜನೆಯನ್ನು ತಂದಿದೆ. ಇದರ ಅಡಿಯಲ್ಲಿ ಉದ್ಯೋಗ ಕಾರ್ಡ್ ಪಡೆದ ಪ್ರತಿಯೊಂದು ಕುಟುಂಬಕ್ಕೂ ಕೆಲಸ ನೀಡಲಾಗುತ್ತದೆ. ಆದರೆ, ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಜನರು ಇದನ್ನು ಬಳಸಿಕೊಳ್ಳಲು ಸಾಕಷ್ಟು ಉತ್ಸಾಹ ತೋರ್ಪಡಿಸಿಲ್ಲ.

ವಲಸೆ ನಿಯಂತ್ರಣ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಉತ್ತೇಜಿಸುವುದು, ಗ್ರಾಮೀಣ ಮಹಿಳೆಯರ ಸಬಲೀಕರಣ, ಅರಣ್ಯಪ್ರದೇಶ ಹೆಚ್ಚಳ ಸೇರಿದಂತೆ ಹಲವು ಕಾರಣಕ್ಕಾಗಿ ನರೇಗಾ ಜಾರಿಗೆ ತರಲಾಗಿದೆ. ಇದರಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ.

ನಗರ ಜಿಪಂ ವ್ಯಾಪ್ತಿಯಲ್ಲಿ ಅನೇಕಲ್, ಬೆಂಗಳೂರು ದಕ್ಷಿಣ, ಉತ್ತರ ಮತ್ತು ಪಶ್ಚಿಮ ತಾಲೂಕುಗಳಿವೆ. ಇವುಗಳ ವ್ಯಾಪ್ತಿಗೆ ಸುಮಾರು 96 ಗ್ರಾಪಂಗಳು ಬರುತ್ತವೆ. ಈ ಎಲ್ಲ ಗ್ರಾಪಂಗಳು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕ ಕೂಲಿ ನೀಡುವ ಕೆಲಸಗಳನ್ನು ಅರಸಿ ನಗರದತ್ತ ಮುಖ ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಕೆಲಸದತ್ತ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಈ ಯೋಜನೆ ಅಡಿಯಲ್ಲಿ ಒಬ್ಬರಿಗೆ ದಿನಕ್ಕೆ 249 ರೂ. ಕೂಲಿ ನೀಡಲಾಗುತ್ತದೆ. ಎಲ್ಲರಿಗೂ ಸಮಾನ ಕೂಲಿಯನ್ನೂ ನೀಡಲಾಗುತ್ತದೆ. ಆದರೆ, ನಗರಕ್ಕೆ ಕೂಲಿ ಕೆಲಸಕ್ಕೆ ತೆರಳುವವರು ದಿನಕ್ಕೆ 400-500 ಸಂಪಾದನೆ ಮಾಡುತ್ತಾರೆ. ಹೀಗಾಗಿ, ನರೇಗಾದಡಿ ಕೆಲಸಕ್ಕೆ ಯಾರೂ ಬರುತ್ತಿಲ್ಲ ಎಂಬ ಅಪವಾದವಿದೆ.

65 ಸಾವಿರ ಜನರಷ್ಟೇ ಭಾಗಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಗರ ಜಿಪಂ ವ್ಯಾಪ್ತಿಯಲ್ಲಿ ವರ್ಷಕ್ಕೆ ಸುಮಾರು 1.3 ಲಕ್ಷ ಜನರಿಗೆಕೆಲಸ ನೀಡಬೇಕು. ಆದರೆ, ಈ ವರ್ಷ ಸುಮಾರು 65 ಸಾವಿರ ಜನರು ಮಾತ್ರ ನರೇಗಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News